ಆರ್‌ಬಿಐ ಜೊತೆಗೆ ಸರಕಾರದ ಜೂಜಾಟ!

Update: 2018-11-03 04:54 GMT

ನೋಟು ನಿಷೇಧದಂತಹ ಮಹತ್ತರ ನಿರ್ಧಾರಕ್ಕೆ ಸರಕಾರ ಬಂದಾಗಲೇ, ಆರ್‌ಬಿಐಯೊಳಗೆ ಸರಕಾರದ ಹಸ್ತಕ್ಷೇಪ ತೀವ್ರ ಟೀಕೆಗೆ ಗುರಿಯಾಗಿತ್ತು. ರಘುರಾಮ್ ರಾಜನ್ ಅವರಂತಹ ಮುತ್ಸದ್ದಿ ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್‌ರನ್ನು ತಂದು ಕೂರಿಸಿದಾಗಲೇ, ಆರ್‌ಬಿಐ ಎದುರಿಸಬೇಕಾದ ಭವಿಷ್ಯದ ಅಪಾಯಗಳನ್ನು ತಜ್ಞರು ಊಹಿಸಿದ್ದರು. ಆರ್‌ಬಿಐಯೊಳಗೆ ಕಾರ್ಪೊರೇಟ್ ಶಕ್ತಿಗಳು ನೇರವಾಗಿ ಮೂಗುತೂರಿಸತೊಡಗಿದ್ದು ಮೋದಿ ಪ್ರಧಾನಿಯಾದ ಬಳಿಕ. ಇದೀಗ ಆರ್‌ಬಿಐ ಮತ್ತು ಕೇಂದ್ರ ಸರಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಯಾವುದೇ ಕ್ಷಣಗಳಲ್ಲಿ ಪಟೇಲ್ ತಮ್ಮ ರಾಜೀನಾಮೆಯನ್ನು ನೀಡಬಹುದು ಎಂಬ ವದಂತಿಗಳು ಹರಡುತ್ತಿವೆ. ಭಾರತದ ಅರ್ಥವ್ಯವಸ್ಥೆ ಅಡಿತಪ್ಪಿರುವ ಈ ಹೊತ್ತಿನಲ್ಲಿ ಈ ತಿಕ್ಕಾಟ ದೇಶದ ಆರ್ಥಿಕತೆಗೆ ಯಾವ ರೀತಿಯಲ್ಲೂ ಒಳಿತನ್ನು ಮಾಡಲಾರದು. ಸದ್ಯದ ಬಿಕ್ಕಟ್ಟಿಗೆ, ಮೋದಿಗೆ ಆಪ್ತವಾಗಿರುವ ಕಾರ್ಪೊರೇಟ್ ಶಕ್ತಿಗಳೇ ಮುಖ್ಯ ಕಾರಣ ಎಂದು ಆರೋಪಿಸಲಾಗಿದೆ. ಕಳೆದ ಒಂದು ವರ್ಷದಿಂದೀಚೆಗೆ ಆರ್‌ಬಿಐಯು ಸಾಲ ನೀಡಿಕೆಗೆ ಸಂಬಂಧಿಸಿ ದುರ್ಬಲ ಬ್ಯಾಂಕ್‌ಗಳಿಗೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಆದರೆ ಕೇಂದ್ರ ಸರಕಾರಕ್ಕೆ ಇದು ಪಥ್ಯವಾಗಿಲ್ಲ.

ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ಬ್ಯಾಂಕ್ ಸಾಲ ನೀಡಿಕೆ ನಿಯಮಗಳನ್ನು ಸಡಿಲಿಸಲು ಅದು ಒತ್ತಡ ಹಾಕುತ್ತಿದೆ. ಆದರೆ ಒಮ್ಮೆ ಆರ್‌ಬಿಐ ತನ್ನ ಕಟ್ಟುನಿಟ್ಟಾದ ಸಾಲ ನೀಡಿಕೆಯ ನಿಯಮಗಳನ್ನು ಸಡಿಲಗೊಳಿಸಿದಲ್ಲಿ, ಈಗಾಗಲೇ ಬ್ಯಾಂಕ್‌ಗಳಿಗೆ 4 ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಪಾವತಿಯನ್ನು ಬಾಕಿಯಿರಿಸಿಕೊಂಡಿರುವ ಸರಕಾರದ ಉದ್ಯಮಿ ಮಿತ್ರರಿಗೆ ಬ್ಯಾಂಕ್‌ಸಾಲವನ್ನು ಮತ್ತೆ ಪಡೆಯಲು ಸಾಧ್ಯವಾಗಲಿದೆ. ಇದರಿಂದಾಗಿ 2018, ಫೆಬ್ರವರಿ 12ರ ಭಾರತೀಯ ರಿಸರ್ವ್ ಬ್ಯಾಂಕ್‌ನ ಸುತ್ತೋಲೆಯು ಕಡ್ಡಾಯಗೊಳಿಸಿರುವ ದಿವಾಳಿತನದ ಪ್ರಕ್ರಿಯೆಯಿಂದ ಪಾರಾಗಲು ಸಾಲಗಾರ ಉದ್ಯಮಿಗಳಿಗೆ ಸಾಧ್ಯವಾಗಲಿದೆ. ಇದರಿಂದಾಗಿ 1 ಲಕ್ಷ ಕೋಟಿ ರೂ.ಗೂ ಅಧಿಕ ಸಾಲದ ಮರುಪಾವತಿಯನ್ನು ಬಾಕಿಯಿರಿಸಿಕೊಂಡಿರುವ ಅದಾನಿ ಗ್ರೂಪ್, ಎಸ್ಸಾರ್, ಟಾಟಾ ಮತ್ತಿತರ ಕಂಪೆನಿಗಳ ವಿದ್ಯುತ್ ಯೋಜನೆಗಳಿಗೆ ಹೊಸ ಜೀವ ಬಂದಂತಾಗಲಿದೆ. ಆದರೆ ಇದು ಭಾರತದ ಆರ್ಥಿಕತೆಯ ಮೇಲೆ ಭವಿಷ್ಯದಲ್ಲಿ ಭಾರೀ ಪರಿಣಾಮಗಳನ್ನು ಬೀರಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಈ ಹಿಂದೆ ದೇಶ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾಗಲೂ ಬಳಸದ ಆರ್‌ಬಿಐ ಕಾಯ್ದೆಯ ಸೆಕ್ಷನ್ 7ನ್ನು ಇದೀಗ ಸರಕಾರ ಬಳಸಲು ಮುಂದಾಗಿದೆ. ಬೃಹತ್ ಸಾಲ ಮರುಪಾವತಿಯ ಕುಣಿಕೆಯಿಂದ ತಮ್ಮನ್ನು ರಕ್ಷಿಸಲು ಹತಾಶ ಪ್ರಯತ್ನ ನಡೆಸುತ್ತಿರುವ ಕಾರ್ಪೊರೇಟ್ ಉದ್ಯಮಿಗಳಿಗೆ ಮತ್ತೆ ಬ್ಯಾಂಕ್ ಸಾಲ ದೊರೆಯುವಂತೆ ಮಾಡುವ ಭಂಡತನದ ಕ್ರಮ ಇದಾಗಿದೆ. ಮುಂಬರುವ ಚುನಾವಣೆಗಳಿಗೆ ಆಡಳಿತ ಪಕ್ಷಕ್ಕೆ ದೇಣಿಗೆಯನ್ನು ನೀಡಲು ಅವು ಶಕ್ತರಾಗುವಂತೆ ಮಾಡುವುದು ಸರಕಾರದ ಈ ನಡೆಗೆ ಕಾರಣವೆಂಬುದು ನಿಚ್ಚಳವಾಗಿ ತಿಳಿಯುತ್ತದೆ. ಕೇಂದ್ರ ಸರಕಾರ ತನ್ನ ಪಕ್ಷ ಮತ್ತು ಪರಿವಾರವನ್ನು ಉಳಿಸುವುದಕ್ಕಾಗಿ ದೇಶದ ಆರ್ಥಿಕತೆಯನ್ನು ಬಲಿಕೊಡಲು, ಆರ್‌ಬಿಐ ಮೇಲೆ ನೇರ ಹಸ್ತಕ್ಷೇಪ ನಡೆಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. 2018, ಫೆಬ್ರವರಿ 12ರ ಆರ್‌ಬಿಐ ಸುತ್ತೋಲೆಯನ್ನು ಕಡೆಗಣಿಸಿ, ಕೆಲವು ಆಯ್ದ ಉದ್ಯಮಿಗಳ ಗುಂಪೊಂದಕ್ಕೆ ಯಾಕೆ ವಿಶೇಷ ಉಪಚಾರವನ್ನು ನೀಡಲಾಗುತ್ತಿದೆಯೆಂಬುದಕ್ಕೆ ಮೋದಿ ಸರಕಾರ ಉತ್ತರಿಸಬೇಕಾಗಿದೆ. ಒಂದು ನಿರ್ದಿಷ್ಟ ಮಟ್ಟಕ್ಕಿಂತ ಅಧಿಕ ಸಾಲ ಮರುಪಾವತಿಯನ್ನು ಬಾಕಿಯಿರಿಸಿ ಕೊಂಡಿರುವ ಎಲ್ಲಾ ಸಾಲಗಾರರು ದಿವಾಳಿ ಕ್ರಮಗಳಿಗೆ ಒಳಪಡುವುದನ್ನು ಕಡ್ಡಾಯಗೊಳಿಸುವ ತನ್ನ ನಿಯಮವನ್ನು ರದ್ದುಪಡಿಸಲು ಆರ್‌ಬಿಐ ಮೇಲೆ ಒತ್ತಡ ಹೇರಲಾಗುತ್ತಿದೆಯೇ ಎಂಬ ಸಂದೇಹಗಳಿಗೂ ಸರಕಾರ ಉತ್ತರಿಸಬೇಕು.

ಸರಕಾರದ ಮಿತ್ರರಾಗಿರುವ ಉದ್ಯಮಿಗಳಿಗೆ ಒಂದು ಕಾನೂನು, ಇತರ ಉದ್ಯಮಿಗಳಿಗೆ ಇನ್ನೊಂದು ಕಾನೂನು ಎಂಬ ಪರಿಸ್ಥಿತಿ ದೇಶದಲ್ಲಿ ನಿಧಾನಕ್ಕೆ ನಿರ್ಮಾಣವಾಗುತ್ತಿದೆ. ದೇಶದ ಆರ್ಥಿಕತೆಯ ಕುರಿತಂತೆ ಅಪಾರ ಕಾಳಜಿಯನ್ನು ಹೊಂದಿದ್ದ ಮುತ್ಸದ್ದಿ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ವಿರುದ್ಧ ಕತ್ತಿ ಮಸೆದ ಶಕ್ತಿಗಳು, ಅವರು ಆರ್‌ಬಿಐ ಗವರ್ನರ್ ಆಗಿ ಎರಡನೇ ಅವಧಿಗೆ ನೇಮಕಗೊಳ್ಳದಂತೆ ನೋಡಿಕೊಂಡವು. ತಮ್ಮ ಯೋಜನೆಗಳಿಗೆ ಮಂಜೂರಾದ ಬ್ಯಾಂಕ್ ಸಾಲದ ಹಣವನ್ನು ಅಕ್ರಮವಾಗಿ ಇತರ ಉದ್ದೇಶಗಳಿಗೆ ಬಳಸಿಕೊಂಡಿದ್ದ ರಾಜಕೀಯ ನಂಟಿರುವ ಉದ್ಯಮಿಗಳ ಹೆಸರುಗಳ ಪಟ್ಟಿಯನ್ನು ರಾಜನ್, ಪ್ರಧಾನಿಯವರ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿದ್ದು ಅವರ ವಿರುದ್ಧ ಕತ್ತಿ ಮಸೆಯಲು ಮುಖ್ಯಕಾರಣವಾಗಿತ್ತು. ಈ ತಪ್ಪಿತಸ್ಥ ಉದ್ಯಮಿಗಳ ವಿರುದ್ಧ ಬಹು ಇಲಾಖಾ ತನಿಖೆ ನಡೆಸುವಂತೆ ರಾಜನ್ ಕೇಂದ್ರ ಸರಕಾರವನ್ನು ಕೋರಿದ್ದರು. ಯಾಕೆಂದರೆ, ಕೇವಲ ಆರ್‌ಬಿಐ ಒಂದೇ ಈ ಪ್ರಭಾವಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿರಲಿಲ್ಲ. ಆರ್‌ಬಿಐ ಹಲವಾರು ಜ್ಞಾಪನಾಪತ್ರಗಳನ್ನು ಕಳುಹಿಸಿದ ಬಳಿಕವೂ ಕೇಂದ್ರ ಸರಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆಯೆಂಬುದು ಇತ್ತೀಚೆಗೆ ಜಾಲತಾಣ ಪತ್ರಿಕೆಯೊಂದು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ದೊರೆತ ಉತ್ತರ ಬಹಿರಂಗಪಡಿಸಿದೆ. ಕೇಂದ್ರದಿಂದ ಸೆಕ್ಷನ್7ರ ಪ್ರಯೋಗವು ಆರ್‌ಬಿಐ ಘನತೆ ಕುಸಿಯುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

ಮಾತ್ರವಲ್ಲದೆ ತಪ್ಪಿತಸ್ಥ ಉದ್ಯಮಿಗಳನ್ನು ಕಾನೂನಿನ ಬಲೆಯಲ್ಲಿ ಸಿಲುಕಿಸಲು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿದ್ದ ಕೆಲವು ಕಠಿಣ ಕ್ರಮಗಳ ವಿಶ್ವಾಸಾರ್ಹತೆ ಪ್ರಶ್ನೆಗೀಡಾಗಲಿದೆ.ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದಲ್ಲಿ, ಜಾಗತಿಕ ಹೂಡಿಕೆದಾರರ ಮುಂದೆ ಭಾರತವು ನಗೆಪಾಟಲಿಗೀಡಾಗಲಿದೆ ಹಾಗೂ ದೇಶದ ವಿತ್ತ ಮಾರುಕಟ್ಟೆಯು ತಲ್ಲಣಗೊಳ್ಳಲಿದೆ. ಇದರ ಸೂಚನೆ ಸರಕಾರಕ್ಕೂ ಇದೆ. ಆದುದರಿಂದಲೇ ಅದು ಪಟೇಲ್, ಶಿವಾಜಿಯ ಬೃಹತ್ ಪ್ರತಿಮೆಗಳಿಂದ ಮತ್ತು ರಾಮಮಂದಿರ ಆಂದೋಲನದಿಂದ ಮುಂದಿನ ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ. ಆದರೆ ಇದರಿಂದ ಬಿಜೆಪಿಯೇನೋ ಗೆಲ್ಲಬಹುದು. ಆದರೆ ಭಾರತದ ಆರ್ಥಿಕತೆ ಮಾತ್ರ ಅತ್ಯಂತ ಘೋರ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಭಾರತದ ಭವಿಷ್ಯವನ್ನು ಒತ್ತೆಯಿಟ್ಟು ರಾಜಕೀಯ ಹಿತಾಸಕ್ತಿಗಾಗಿ ಆರ್‌ಬಿಐ ಜೊತೆಗೆ ಜೂಜಾಟಕ್ಕಿಳಿದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News