ಇಂಡೊನೇಷ್ಯಾ: ವಿಮಾನದ ಅವಶೇಷಗಳನ್ನು ಶೋಧಿಸುತ್ತಿದ್ದ ಮುಳುಗು ತಜ್ಞನ ಸಾವು

Update: 2018-11-03 09:29 GMT

ಜಕಾರ್ತ,ಅ.3 : ಸೋಮವಾರ ಇಂಡೊನೇಷ್ಯಾದಲ್ಲಿ ಸಮುದ್ರದಲ್ಲಿ ಪತನಗೊಂಡು ಎಲ್ಲಾ 189 ಪ್ರಯಾಣಿಕರ ಸಾವಿಗೆ ಕಾರಣವಾದ ಲಯನ್ ಏರ್ ವಿಮಾನದ ಅವಶೇಷಗಳನ್ನು ಜಾವಾ ಸಮುದ್ರದ  ತಳದಲ್ಲಿ ಹುಡುಕುತ್ತಿದ್ದ ಮುಳುಗುತಜ್ಞರ ತಂಡದ ಭಾಗವಾಗಿದ್ದ 48 ವರ್ಷದ ಸ್ಯಚ್ರುಲ್ ಅಂಟೊ ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ವಾಯು ಒತ್ತಡದ ತೀವ್ರ ಕುಸಿತದಿಂದ ಅವರು ಸಾವನ್ನಪ್ಪಿದ್ದಾರೆಂದು ತಿಳಿಯಲಾಗಿದೆ.

ಅಂಟೊ ಅವರು ಈ ಹಿಂದೆ ಪಲು ಎಂಬಲ್ಲಿ ಸೆಪ್ಟೆಂಬರ್ ನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿ ವೇಳೆ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದರಲ್ಲದೆ ನಾಲ್ಕು ವರ್ಷಗಳ ಹಿಂದೆ ಏರ್ ಏಷ್ಯಾ ವಿಮಾನ ಪತನಗೊಂಡಾಗ ಕೂಡ ರಕ್ಷಣಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು.

ಸೋಮವಾರ ಪತನಗೊಂಡ ಲಯನ್ ಏರ್ ವಿಮಾನವು  ಜಕಾರ್ತದಿಂದ ಸುಮಾತ್ರ ದ್ವೀಪದ ಪಂಗ್ಕಲ್ ಪಿನಂಗ್ ನಗರಕ್ಕೆ ತೆರಳುತ್ತಿತ್ತು. ನಿಲ್ದಾಣದಿಂದ ಹೊರಟ ಕಲವೇ ನಿಮಿಷಗಳಲ್ಲಿ ಅದು ಪತನಗೊಂಡಿತ್ತು. ಈಗಾಗಲೇ  ವಿಮಾನದ ಫ್ಲೈಟ್ ಡಾಟಾ ರೆಕಾರ್ಡರ್ ಪತ್ತೆ ಹಚ್ಚಲಾಗಿದ್ದು ಎರಡನೇ ಬ್ಲ್ಯಾಕ್ ಬಾಕ್ಸ್ ಗೆ ಶೋಧ ಕಾರ್ಯ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News