ಹಿಂಗಾರು ಆಗಮನ ಹಿನ್ನೆಲೆ: ನ.7ರ ವರೆಗೂ ಮಳೆ ಸಾಧ್ಯತೆ

Update: 2018-11-03 14:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.3: ಬೆಂಗಳೂರು ನಗರಕ್ಕೆ ಹಿಂಗಾರು ಆಗಮನದ ಹಿನ್ನೆಲೆಯಲ್ಲಿ ನ.7 ರವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂಗಾರು ನಿರ್ಗಮನವಾಗಿ ಎರಡು ವಾರ ಕಳೆದ ನಂತರ ದಕ್ಷಿಣ ಒಳನಾಡಿಗೆ ಹಿಂಗಾರಿನ ಆಗಮನವಾಗಿದೆ. ರಾಜಧಾನಿಯಲ್ಲಿ ಮೊದಲೆರಡು ದಿನಗಳ ಕಾಲ ಅಲ್ಲಲ್ಲಿ ತುಂತುರು ಮಳೆ ಸುರಿದಿದೆ. ಸಾಮಾನ್ಯವಾಗಿ ಹಿಂಗಾರು ಆಗಮನದ ವೇಳೆ ಜೋರು ಮಳೆ ಸುರಿಯುತ್ತದೆ. ಆದರೆ ಈ ವರ್ಷ ತುಂತುರು ಮಳೆಯಾಯಿತು. ನಗರದ ಕೇಂದ್ರಭಾಗಗಳಲ್ಲಿ ಕೆಲವಡೆ ಮಾತ್ರ ಮಳೆಯಾಗಿದೆ. ಹೊರವಲಯದಲ್ಲಿ ಹೆಚ್ಚಿನ ಭಾಗಗಳಲ್ಲಿ ಮಳೆ ಬಂದಿದೆ.

ಶುಕ್ರವಾರ ಹಾಗೂ ಶನಿವಾರವೂ ಮೋಡ ಕವಿದ ವಾತಾವರಣವಿತ್ತು. ಮೋಡ ಕವಿದ ವಾತಾವರಣವಿರುವುದರಿಂದ ಗರಿಷ್ಠ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಹಿಂಗಾರು ಸಾಮಾನ್ಯವಾಗಿ ಅ.20ಕ್ಕೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಬರುತ್ತದೆ. ಈ ಬಾರಿ ಮುಂಚಿತವಾಗಿಯೇ ಅಂದರೆ ಅ.8 ರಂದು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿನ ಚಂಡಮಾರುತವು ಹಿಂಗಾರು ಪ್ರವೇಶ ತಡವಾಗುವಂತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News