ಚೀನಾದ ಈ ನೀತಿಯಿಂದ ಭಾರತದ ಹುಲಿ, ಖಡ್ಗಮೃಗಗಳಿಗೆ ಕುತ್ತು!

Update: 2018-11-04 14:41 GMT

ಹೊಸದಿಲ್ಲಿ,ನ.4: ಹುಲಿಗಳು ಮತ್ತು ಖಡ್ಗಮೃಗಗಳ ಅಂಗಾಂಗಗಳ ಮಾರಾಟದ ಮೇಲಿನ 25ವರ್ಷಗಳ ಹಿಂದಿನ ನಿಷೇಧವನ್ನು ಚೀನಾ ಸಡಿಲಿಸಿರುವ ಹಿನ್ನೆಲೆಯಲ್ಲಿ ಈ ಪ್ರಾಣಿಗಳ ಕಳ್ಳಬೇಟೆಯ ವಿರುದ್ಧ ಕಟ್ಟೆಚ್ಚರವನ್ನು ವಹಿಸುವಂತೆ ಸರಕಾರವನ್ನು ಆಗ್ರಹಿಸಿರುವ ಭಾರತೀಯ ವನ್ಯಜೀವಿ ತಜ್ಞರು, ಭಾರತವು ಈ ಬಗ್ಗೆ ತನ್ನ ಕಳವಳವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚೀನಾದ ಜೊತೆ ಪ್ರಸ್ತಾಪಿಸಬೇಕು ಎಂದು ಹೇಳಿದ್ದಾರೆ.

ಚೀನಾದ ಈ ನಿರ್ಧಾರವು ಈ ಪ್ರಾಣಿಗಳ ಸಂಖ್ಯೆ ಕುಸಿಯಲು ಕಾರಣವಾಗುವ ಸಾಧ್ಯತೆಯಿದೆ ಮತ್ತು ಭಾರತದಲ್ಲಿ ಹುಲಿ ಹಾಗೂ ಖಡ್ಗಮೃಗಗಳ ಸಂರಕ್ಷಣೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಔಷಧೀಯ ಬಳಕೆಗಾಗಿ ಹುಲಿಯ ಮೂಳೆಗಳು ಮತ್ತು ಖಡ್ಗಮೃಗಗಳ ಕೊಂಬುಗಳ ಮೇಲಿನ ನಿಷೇಧವನ್ನು ಚೀನಾ ಭಾಗಶಃ ಹಿಂದೆಗೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಳಿವಿನಂಚಿಲ್ಲಿರುವ ಈ ಪ್ರಾಣಿಗಳ ರಕ್ಷಣೆಗಾಗಿ ಚೀನಾ 1993ರಲ್ಲಿ ನಿಷೇಧವನ್ನು ಹೇರಿತ್ತು.

ನಿಷೇಧವನ್ನು ಹಿಂದೆಗೆದುಕೊಂಡಿರುವ ಕ್ರಮವು ವಿಶ್ವಾದ್ಯಂತ ಇವೆರಡು ವನ್ಯಪ್ರಾಣಿಗಳ ಸಂಖ್ಯೆ ಕಡಿವೆುಯಾಗಲು ಕಾರಣವಾಗುವ ಸಾಧ್ಯತೆಗಳಿವೆ ಎಂದು ಡಬ್ಲುಡಬ್ಲುಎಫ್-ಇಂಡಿಯಾ ಸೆಕ್ರೆಟರಿಯೇಟ್‌ನ ನಿರ್ದೇಶಕ ದೀಪಂಕರ್ ಘೋಷ್ ಅವರು ಹೇಳಿದರು.

ಇತ್ತೀಚಿನ ಸಮೀಕ್ಷೆಯಂತೆ ಭಾರತದಲ್ಲಿ 2,226 ಹುಲಿಗಳಿವೆ ಮತ್ತು ಭಾರತ ಹಾಗೂ ನೇಪಾಳದಲ್ಲಿ ಒಟ್ಟು 3,500 ಖಡ್ಗಮೃಗಗಳು ಉಳಿದುಕೊಂಡಿವೆ.

 ಹುಲಿಯ ಮೂಳೆಗಳು ಮತ್ತು ಖಡ್ಗಮೃಗಗಳ ಕೊಂಬುಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿರುವ ಜನರು ಭಾರತದಲ್ಲಿ ವನ್ಯಜೀವಿಗಳನ್ನು ತಮ್ಮ ಗುರಿಯಾಗಿಸಿಕೊಳ್ಳಬಹುದು. ವಿಶ್ವದ ಶೇ.60ರಷ್ಟು ಹುಲಿಗಳು ಮತ್ತು ಶೇ.85ರಷ್ಟು ಖಡ್ಗಮೃಗಳನ್ನು ಹೊಂದಿರುವ ನಮ್ಮ ದೇಶವು ಕಳ್ಳ ಬೇಟೆಯ ಬೆದರಿಕೆಗೊಳಗಾಗಲಿದೆ ಎಂದ ಘೋಷ್,ಭಾರತ ಮತ್ತು ಇತರ ರಾಷ್ಟ್ರಗಳು ಜಾಗತಿಕ ಹುಲಿ ಚೇತರಿಕೆ ಕಾರ್ಯಕ್ರಮದಡಿ 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಗುರಿಯನ್ನು ಹೊಂದಿವೆ. ಚೀನಾ ನಿಷೇಧವನ್ನು ಹಿಂದೆಗೆದುಕೊಂಡಿರುವುದು ಈ ಗುರಿಸಾಧನೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News