ಅವನಿ ಹತ್ಯೆ: ಮಹಾರಾಷ್ಟ್ರ ಸರ್ಕಾರ ವಿರುದ್ಧ ಮೇನಕಾ ಕೆಂಡ

Update: 2018-11-05 03:55 GMT

ಹೊಸದಿಲ್ಲಿ, ನ.5: ಎರಡು ಮರಿಗಳ ತಾಯಿ ಅವನಿ ಹುಲಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಹಾಗೂ ಪ್ರಾಣಿಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಈ ಅತ್ಯಂತ ಹೇಯ ಕೃತ್ಯ, ಪ್ರಾಣಿಗಳ ಮೇಲೆ ಅನುಕಂಪ ಇಲ್ಲದಿರುವುದಕ್ಕೆ ಸ್ಪಷ್ಟವಾದ ನಿದರ್ಶನ. ಇದು ಕಾನೂನಾತ್ಮಕ, ಅಪರಾಧಾತ್ಮಕ ಹಾಗೂ ರಾಜಕೀಯ ಪ್ರಕರಣ" ಎಂದು ಬಣ್ಣಿಸಿದ್ದಾರೆ.

ಎರಡು ವರ್ಷಗಳಲ್ಲಿ 13 ಮಂದಿಯನ್ನು ಈ ಹೆಣ್ಣುಹುಲಿ ಸಾಯಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದ ಯವತ್ಮಾಲ್ ಅರಣ್ಯದಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಹಲವು ಶಿಷ್ಟಾಚಾರಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅವನಿ ಪ್ರಕರಣವನ್ನು ಸರ್ಕಾರ ನಿಭಾಯಿಸಿದ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮೇನಕಾ ಗಾಂಧಿ, ಹತ್ಯೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದು ಪಕ್ಕಾ ಅಪರಾಧ ಕೃತ್ಯ. ಅವರದ್ದೇ ಅರಣ್ಯ ಇಲಾಖೆಯ ಮಂದಿಯಿಂದ ಹಾಗೂ ದೇಶಾದ್ಯಂತ ನಾಗರಿಕರಿಂದ ಮನವಿಗಳು ಬಂದರೂ ಕೂಡಾ, ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್, ಹತ್ಯೆಗೆ ಆದೇಶ ನೀಡಿರುವುದು ಖಂಡನೀಯ ಎಂದು ಸಚಿವೆ ಹೇಳಿದ್ದಾರೆ.

ಆದರೆ ತಮ್ಮ ಕ್ರಮವನ್ನು ಸಚಿವ ಮುಂಗಂಟಿವರ್ ಸಮರ್ಥಿಸಿಕೊಂಡಿದ್ದಾರೆ. ಹೆಣ್ಣುಹುಲಿಗೆ ಮತ್ತು ಭರಿಸುವ ಚುಚ್ಚುಮದ್ದು ನೀಡುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಹುಲಿಯನ್ನು ಸಾಯಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News