ತಂದೆಯನ್ನು ಮದೀನಾದಲ್ಲಿ ದಫನ ಮಾಡಬೇಕು: ಜಮಾಲ್ ಖಶೋಗಿ ಪುತ್ರರು

Update: 2018-11-05 08:20 GMT

ವಾಷಿಂಗ್ಟನ್, ನ.5: ತಮ್ಮ ತಂದೆಯ ಕಳೇಬರವನ್ನು ಹಸ್ತಾಂತರಿಸುವಂತೆ ಹತ್ಯೆಗೈಯ್ಯಲ್ಪಟ್ಟ ಸೌದಿ ಪತ್ರಕರ್ತ ಜಮಾಲ್ ಖಶೋಗಿಯವರ ಇಬ್ಬರು ಪುತ್ರರು ಮನವಿ ಮಾಡಿದ್ದಾರಲ್ಲದೆ, ಅವರನ್ನು ಪವಿತ್ರ ಮದೀನಾದಲ್ಲಿರುವ ಅಲ್-ಬಖಿಯಲ್ಲಿ ದಫನ ಮಾಡಲು  ಸೌದಿ ಅರೇಬಿಯಾಗೆ ಮರಳಲಿಚ್ಛಿಸುವುದಾಗಿ ತಿಳಿಸಿದ್ದಾರೆ.

ತಮ್ಮ ತಂದೆಯ ಮೃತದೇಹವಿಲ್ಲದೆ ಕುಟುಂಬ ತಂದೆಯ ಸಾವನ್ನು ಶೋಕಿಸಲು ಹಾಗೂ  ಆ ಭಾವಾತ್ಮಕ ಹೊರೆಯನ್ನು ತಗ್ಗಿಸಲು ಸಾಧ್ಯವಾಗುತ್ತಿಲ್ಲ ಎಂದು ಖಶೋಗಿ ಅವರ ಪುತ್ರರಾದ ಸಲಾಹ್ ಹಾಗೂ ಅಬ್ದುಲ್ಲಾ ಖಶೋಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

``ಇದು ಸಹಜ ಪರಿಸ್ಥಿತಿಯಲ್ಲ, ಸಾವು ಕೂಡ ಸಹಜವೇ ಅಲ್ಲ. ನಮಗೆ ಈಗ ಅವರನ್ನು ಮದೀನಾದ ಅಲ್-ಬಖಿಯಲ್ಲಿ  ನಮ್ಮ ಕುಟುಂಬದ ಇತರರನ್ನು ದಫನ ಮಾಡಿದಲ್ಲಿ ದಫನ ಮಾಡಬೇಕಿದೆ'' ಎಂದು ಸಲಾಹ್ ಖಶೋಗಿ ಹೇಳಿದ್ದಾರೆ. ಈ ಬಗ್ಗೆ ಸೌದಿ ಅಧಿಕಾರಿಗಳಲ್ಲಿ ಮಾತನಾಡಿದ್ದಾಗಿ ಹಾಗೂ ತಮ್ಮ ಇಚ್ಛೆ ಶೀಘ್ರ ನೆರವೇರಬಹುದೆಂದು ತಾವು ನಂಬಿದ್ದಾಗಿ ಅವರು ತಿಳಿಸಿದ್ದಾರೆ.

ಅಕ್ಟೋಬರ್ 24ರಂದು ಸೌದಿ ರಾಜಕುಮಾರ ಸಲ್ಮಾನ್ ಭೇಟಿಯಾಗಿದ್ದ ಸಲಾಹ್,  ನಂತರ  ವಾಷಿಂಗ್ಟನ್ ಗೆ ತೆರಳಿದ್ದರು. ಖಶೋಗಿ ಸಾವಿಗೆ ಕಾರಣರಾದವರನ್ನು ಶಿಕ್ಷಿಸುವುದಾಗಿ ರಾಜಕುಮಾರ ಭರವಸೆ ನೀಡಿದ್ದಾರೆ ಎಂದು ಸಂದರ್ಶನದಲ್ಲಿ ಸಲಾಹ್ ತಿಳಿಸಿದ್ದಾರೆ.

“ಅವರ ಆತ್ಮಕ್ಕೆ ಶಾಂತಿ ದೊರಕುವುದು ನಮಗೆ ಮುಖ್ಯ. ಅವರು ಸಾವನ್ನಪ್ಪಿದ್ದಾರೆಂದು ನಂಬಲು ಸಾಧ್ಯವಾಗುತ್ತಿಲ್ಲ. ತಂದೆಯ ಸಾವಿನ ಬಗ್ಗೆ ಹಲವಾರು ತಪ್ಪು ಮಾಹಿತಿಗಳಿವೆ. ತಂದೆ ಮುಸ್ಲಿಂ ಬ್ರದರ್‍ ಹುಡ್ ಸಂಘಟನೆಯ ಬೆಂಬಲಿಗರೆಂಬ  ಆರೋಪಗಳು ನಿಜವಲ್ಲ, ಅವರು ಭಿನ್ನಮತೀಯರಾಗಿರಲಿಲ್ಲ. ಅವರು ಆಡಳಿತದಲ್ಲಿ ನಂಬಿಕೆಯಿರಿಸಿದ್ದರು. ಈಗ ನಡೆಯುತ್ತಿರುವ ಸುಧಾರಣೆಗಳಲ್ಲೂ ಅವರು ನಂಬಿಕೆಯಿರಿಸಿದ್ದರು'' ಎಂದು ಸಲಾಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News