ಔಷಧೀಯ ಸಂಶೋಧನಾ ಕೇಂದ್ರ ಸ್ಥಾಪನೆ: ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ನ.5: ಪರಂಪರೆಯ ಸಸಿಗಳಲ್ಲಿ ಔಷಧಿ ಗುಣ ಕಂಡು ಹಿಡಿಯುವ ಉದ್ದೇಶದಿಂದ ಬೆಂಗಳೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಆವರಣದೊಳಗೆ ‘ಔಷಧೀಯ ಸಂಶೋಧನಾ ಕೇಂದ್ರ’ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಸ್. ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ನಗರದ ಧನ್ವಂತರಿ ರಸ್ತೆಯ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿ ಆಯುಷ್ ಇಲಾಖೆ ಆಯೋಜಿಸಿದ್ದ, 3ನೆ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸನಾತನ ಔಷಧಿ ಸಸ್ಯಗಳನ್ನು ರಕ್ಷಣೆ ಮಾಡುವಲ್ಲಿ ಬೆಂಗಳೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಅಮೂಲ್ಯ ಕೊಡುಗೆ ನೀಡಿದೆ. ಹಾಗಾಗಿ, ಇಲ್ಲಿನ ಆವರಣದಲ್ಲಿ ಔಷಧೀಯ ಸಂಶೋಧನಾ ಕೇಂದ್ರ ಸ್ಥಾಪಿಸಿದರೆ, ಮತ್ತಷ್ಟು ಸಸ್ಯಗಳಲ್ಲಿನ ಔಷಧಿ ಗುಣ ಕಂಡು ಹಿಡಿಯಬಹುದು. ಈ ಸಂಬಂಧ ಮಹಾ ವಿದ್ಯಾಲಯವೂ ಕ್ರಿಯಾ ಯೋಜನೆ ಸಲ್ಲಿಸಿದರೆ, ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದು ಕಡೆ ವಿಜ್ಞಾನ, ಮತ್ತೊಂದೆಡೆ ಆಯುರ್ವೇದ ಇದೆ. ವಿಜ್ಞಾನ ಆಲೋಪತಿ ಒಪ್ಪಿಕೊಂಡರೆ, ಜನರು ಆಯುರ್ವೇದ ಅಪ್ಪಿಕೊಳ್ಳಬೇಕು ಎನ್ನುವ ಹಂಬಲ ಇದೆ. ಅದು ಅಲ್ಲದೆ, ವಿಜ್ಞಾನ ಮತ್ತು ಆಯುರ್ವೇದಕ್ಕೆ ವ್ಯತ್ಯಾಸ ಇದ್ದು, ಜನ ತ್ವರಿತವಾಗಿ ರೋಗ ನಿವಾರಣೆ ಬಯಸುತ್ತಾರೆ. ಇನ್ನು ಕೆಲವರು ಪ್ರಕೃತಿ ರೀತಿ ರೋಗ ಗುಣಪಡಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಯುರ್ವೇದಕ್ಕೆ ಮರುಜೀವ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಬೆಂಗಳೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮಾಡುತ್ತಿದೆ ಎಂದು ಪ್ರಶಂಸಿಸಿದರು.
5 ರೂ.ಗೆ ಚಿಕಿತ್ಸೆ: ಬರೀ 5, 10 ರೂಪಾಯಿಯಲ್ಲೇ ಕಡು ಬಡವರಿಗೆ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಹತ್ತು ಹಲವು ಗಂಭೀರ ರೋಗಗಳು ಗುಣಪಡಿಸಿದ ಉದಾಹರಣೆ ಇದೆ. ಇಂತಹ ಸೇವೆ ಎಲ್ಲಿಯೂ ದೊರೆಯುತ್ತಿಲ್ಲ ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಆಯುರ್ವೇದವೂ ದೇಶದ ಸಂಸ್ಕೃತಿ, ಜೀವನ ಶೈಲಿ ಆಗಿದೆ. ಇಂದು ವಿದೇಶಿಗರು ಬಹುಸಂಖ್ಯೆಯಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಾರೆ. ಅದರಲ್ಲೂ ಕೇರಳದಲ್ಲಿ ಇಂದಿಗೂ ಆಯುರ್ವೇದ ಆದಾಯದ ಮೂಲವಾಗಿದೆ. ಹಾಗಾಗಿ, ನಮ್ಮ ರಾಜ್ಯದಲ್ಲೂ ಆಯುರ್ವೇದ ಚಿಕಿತ್ಸೆ ವ್ಯಾಪ್ತಿಯನ್ನು ಹೆಚ್ಚಿಸಬೇಕು ಎಂದು ನುಡಿದರು.
ಪೋಸ್ಟ್ ಮಾಸ್ಟರ್ ಜನರಲ್(ಬೆಂಗಳೂರು) ಕರ್ನಲ್ ಅರವಿಂದ್ ವರ್ಮಾ ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆ ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವಾಗ ಅನೇಕ ಆಸ್ಪತ್ರೆಗಳಿಗೆ ಹೋದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬಳಿಕ, ಆಯುರ್ವೇದ ಚಿಕಿತ್ಸೆ ಆರಂಭಿಸಿದ ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣ ಮುಖರಾದರು. ಆದ್ದರಿಂದ, ಆಯುರ್ವೇದಕ್ಕೆ ಮಿಗಿಲಾದ ಚಿಕಿತ್ಸಾ ಪದ್ಧತಿ ಮತ್ತೊಂದು ಇಲ್ಲವೆಂದು ಹೇಳಿದರು.
ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಅವರು ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿದರು. ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಅಹಲ್ಯಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಚೀನಾ ಮಾದರಿ
ಚೀನಾ ದೇಶದಲ್ಲಿ ಮೊದಲು ತಮ್ಮ ವಿದ್ಯೆಯನ್ನೇ ಪ್ರಯತ್ನಿಸಿ ನಂತರ, ಅಲೋಪತಿಗೆ ಹೋಗುತ್ತಾರೆ. ಈ ಮಾದರಿಯನ್ನೇ ಅನುಸರಿಸಿ, ನಾವು ಸಹ ಮೊದಲು ಆಯುರ್ವೇದ ಬಳಸಲು ಪ್ರಯತ್ನಿಸೋಣ.
-ಎಸ್.ಶಿವಾನಂದ ಪಾಟೀಲ್, ಸಚಿವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸರಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಆವರಣದೊಳಗಿನ ರಸ್ತೆ ಅಭಿವೃದ್ಧಿ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ಈ ಸಮಸ್ಯೆ ಬಗೆಹರಿಸಲಾಗುವುದು’
-ದಿನೇಶ್ ಗುಂಡೂರಾವ್
ಯಾವುದೇ ರೀತಿಯ ದುಷ್ಟರಿಣಾಮವಿಲ್ಲದ ಆಯುರ್ವೇದ ಚಿಕಿತ್ಸೆ ಪಡೆಯಲು ಜನತೆ ಮುಂದೆ ಬರಬೇಕು. ಆಯುರ್ವೇದ ಔಷಧಿ ಚಿಕಿತ್ಸೆ ಸಸ್ಯಗಳ ಬಗ್ಗೆ ಎಲ್ಲರೂ ಅರಿಯಬೇಕು. ಇವುಗಳನ್ನು ಉಳಿಸಿ-ಬೆಳಸಲು ಪ್ರತಿಯೊಬ್ಬರು ಕೈಜೋಡಿಸಬೇಕು.
-ಮೀನಾ ಕ್ಷಿ ನೇಗಿ, ಆಯುಕ್ತೆ, ಆಯುಷ್ ಇಲಾಖೆ