ದೇಶಕ್ಕೆ ಆರೆಸ್ಸೆಸ್-ಬಿಜೆಪಿ ಕೊಡುಗೆ ಶೂನ್ಯ: ಸಚಿವ ಪ್ರಿಯಾಂಕ್ ಖರ್ಗೆ

Update: 2018-11-05 13:47 GMT

ಬೆಂಗಳೂರು, ನ.5: ದೇಶಕ್ಕೆ ಆರೆಸ್ಸೆಸ್ ಹಾಗೂ ಬಿಜೆಪಿಯ ಕೊಡುಗೆ ಶೂನ್ಯ. ಅವರಿಗೆ ಯಾವುದೇ ಇತಿಹಾಸವಿಲ್ಲ. ಆದುದರಿಂದಲೇ, ಸಂವಿಧಾನವನ್ನು ಬದಲಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚಿಕ್ಕಜಾಲದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳ ನೇಮಕ ಹಾಗೂ ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುತ್ವದ ಅಜೆಂಡಾ ಮುಂದಿಟ್ಟುಕೊಂಡು ವಿಚಿತ್ರವಾದ ಹೇಳಿಕೆಗಳನ್ನು ನೀಡಿ, ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಆರೆಸ್ಸೆಸ್-ಬಿಜೆಪಿ ಮಾಡುತ್ತಿದೆ. ಪ್ರಧಾನಿ ನರೇಂದ್ರಮೋದಿ ಮನ್ ಕೀ ಬಾತ್ ಹೇಳುತ್ತಾರೆ. ಆದರೆ, ಅವರು ಸಂಪುಟದ ಸಹದ್ಯೋಗಿ, ಸಂಸದ ಅನಂತ್‌ ಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಚಕಾರವೆತ್ತುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದ ಸಂವಿಧಾನವು ಜಾತ್ಯತೀತ ತತ್ವಗಳ ತಳಹದಿಯ ಮೇಲಿದೆ. ಆದುದರಿಂದ, ಸಂಸದರಾಗಿರುವ ಅನಂತ್‌ ಕುಮಾರ್ ಹೆಗಡೆ ಜಾತ್ಯತೀತತೆ ಬಗ್ಗೆ ಅರ್ಥ ಮಾಡಿಕೊಂಡು ಮಾತುಗಳನ್ನಾಡುವುದು ಉತ್ತಮ. ಇತಿಹಾಸದ ಪುಟಗಳನ್ನು ತಿರುವು ಹಾಕಿ ನೋಡಿದರೆ, ಈ ದೇಶಕ್ಕೆ ಅವರ ಕೊಡುಗೆ ಶೂನ್ಯ ಎಂಬುದು ತಿಳಿಯುತ್ತದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನವನ್ನು ಬದಲಾಯಿಸಿ, ಮನುಸ್ಮೃತಿಯನ್ನು ತರಲು ಬಿಜೆಪಿ-ಆರೆಸ್ಸೆಸ್ ಪ್ರಯತ್ನಿಸುತ್ತಿದೆ. ಬಲವಂತವಾಗಿ ಮನುಸ್ಮೃತಿಯನ್ನು ಜನತೆಯ ಮೇಲೆ ಹೇರಲು ಪ್ರಯತ್ನಿಸುವುದು ಬಿಟ್ಟು, ಮೊದಲು ಅದನ್ನು ಬಿಜೆಪಿ ಹಾಗೂ ಆರೆಸ್ಸೆಸ್‌ನವರು ತಮ್ಮ ಮನೆಗಳಲ್ಲಿ ಆಚರಿಸಲಿ ಎಂದು ಅವರು ಸವಾಲು ಹಾಕಿದರು.

ಆರೆಸ್ಸೆಸ್ ಹಾಗೂ ಬಿಜೆಪಿಯನ್ನು ವಿರೋಧಿಸಿದರೆ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ, 2002ರವರೆಗೆ ನಾಗ್ಪುರದಲ್ಲಿರುವ ಆರೆಸ್ಸೆಸ್‌ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿರಲಿಲ್ಲ. ಇವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ದಲಿತ ಹಿಂದುಳಿದ ವರ್ಗಗಳ ವಿರೋಧಿಯಾಗಿರುವ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಎಸ್ಸಿ-ಎಸ್ಟಿ ಕಾಯ್ದೆಯನ್ನು ಬಲಹೀನಗೊಳಿಸಲು ಮುಂದಾಗಿತ್ತು. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಬಿಜೆಪಿ ಹಾಗೂ ಆರೆಸ್ಸೆಸ್ ಸಿದ್ಧಾಂತಗಳನ್ನು ಪ್ರಶ್ನಿಸುವ ಪ್ರಗತಿಪರ ಚಿಂತಕರು, ಪತ್ರಕರ್ತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇಂದು ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದೆ. 55 ರೂ.ಇದ್ದ ಪೆಟ್ರೋಲ್ ಬೆಲೆ 85 ರೂ.ಗೆ ಏರಿದೆ. ಅಡುಗೆ ಅನಿಲ ಸಿಲಿಂಡರ್ ದರ 400 ರೂ.ಗಳಿಂದ 920 ರೂ.ಗಳಿಗೆ ಹೆಚ್ಚಳವಾಗಿದೆ. ದೇಶದ ಇತಿಹಾಸದಲ್ಲೆ ಬೆಲೆ ಏರಿಕೆ ದಾಖಲೆ ಮಟ್ಟಕ್ಕೆ ಏರಿಕೆ ಮಾಡಿದ್ದು ಮೋದಿ ಸರಕಾರದ ಸಾಧನೆ ಎಂದು ಕಿಡಿಗಾರಿದರು.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ದೇಶದ ಯುವಕರಿಗೆ ಭರವಸೆ ನೀಡಿದ್ದ ನರೇಂದ್ರಮೋದಿ, ಎಷ್ಟು ಮಂದಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಉದ್ಯೋಗ ಕೊಡಿ ಎಂದು ಕೇಳಿದರೆ, ಪಕೋಡಾ ಮಾರಿ ಎಂದು ಪ್ರಧಾನಿ ಹೇಳುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಆಡಳಿತರೂಢ ಬಿಜೆಪಿ ಈ ಬಾರಿ ಸೋಲು ಅನುಭವಿಸುವುದು ಸ್ಪಷ್ಟ. ಬಡವರ ವಿರೋಧಿಯಾಗಿರುವ ಮೋದಿ ಸರಕಾರವನ್ನು ಅಧಿಕಾರದಿಂದ ದೂರವಿಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧವಾಗಬೇಕು ಎಂದು ಕೃಷ್ಣಭೈರೇಗೌಡ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ತಾ.ಪಂ.ಅಧ್ಯಕ್ಷೆ ಜ್ಯೋತಿ ಕಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವುದಾಗಿ ಹೇಳಿದ್ದ ನರೇಂದ್ರಮೋದಿ, ಇದೀಗ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಕೋಟ್ಯಂತರ ರೂ.ಹಗರಣ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ.

-ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News