ಕೆಪಿಎಸ್‌ಸಿ ಕಚೇರಿಯಲ್ಲಿ ಸಹೋದ್ಯೋಗಿಯಿಂದ ಮಹಿಳೆಗೆ ಹಲ್ಲೆ

Update: 2018-11-05 14:53 GMT

ಬೆಂಗಳೂರು, ನ.5: ವಿಧಾನಸೌಧದ ಹಿಂಭಾಗದಲ್ಲಿಯೇ ಇರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಅದೇ ಕಚೇರಿಯ ಸಿಬ್ಬಂದಿ ನಟರಾಜ್ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಗಾಯಗೊಂಡಿರುವ ಜಯಲಕ್ಷ್ಮೀ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಎಂದಿನಂತೆ ಕಚೇರಿಗೆ ಬಂದ ಜಯಲಕ್ಷ್ಮೀ ಅವರೊಂದಿಗೆ ಜಗಳ ತೆಗೆದ ಆರೋಪಿ ನಟರಾಜ್, ಮಚ್ಚಿನಿಂದ ಜಯಲಕ್ಷ್ಮೀ ಅವರ ಕತ್ತಿನ ಭಾಗಕ್ಕೆ ಹೊಡೆದಿದ್ದಾನೆ. ಆರೋಪಿ ಕೃತ್ಯವೆಸಗಲು ಮಚ್ಚು ಸಮೇತ ಬಂದಿದ್ದ ಎನ್ನಲಾಗಿದ್ದು, ಈ ಸಂಬಂಧ ನಟರಾಜ್‌ನನ್ನು ವಶಕ್ಕೆ ಪಡೆದಿರುವ ನಗರದ ವಿಧಾನಸೌಧ ಠಾಣಾ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ಜಯಲಕ್ಷ್ಮೀ ಹಾಗೂ ನಟರಾಜ್ ಇಬ್ಬರೂ ಕೂಡ ಕೆಪಿಎಸ್ಸಿ ಸಿಬ್ಬಂದಿಯಾಗಿದ್ದು, ನಟರಾಜ್‌ಗೆ ಮದುವೆಯಾಗಿ ವಿಚ್ಛೇದನ ಆಗಿದ್ದರೂ ಜಯಲಕ್ಷ್ಮೀ ಅವರನ್ನು ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಜಯಲಕ್ಷ್ಮೀ ಅವರಿಗೂ ಮದುವೆಯಾಗಿದ್ದು, ಒಬ್ಬ ಮಗ ಇದ್ದಾನೆ ಎಂದು ತಿಳಿದುಬಂದಿದೆ.

ಈ ಮೊದಲು ನಟರಾಜ್ ಬಳಿ ಸಲುಗೆಯಿಂದ ಇದ್ದ ಜಯಲಕ್ಷ್ಮೀ ಆತನ ವರ್ತನೆಯಿಂದ ಬೇಸತ್ತು ಇತ್ತೀಚೆಗೆ ದೂರವಾಗಿದ್ದರು. ಇದರಿಂದ ಕುಪಿತನಾದ ನಟರಾಜ್, ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಹಲ್ಲೆಯಿಂದ ಜಯಲಕ್ಷ್ಮೀ ಅವರ ತಲೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದೆ ಎನ್ನಲಾಗಿದೆ. ಇಬ್ಬರ ಗಲಾಟೆ ಬಿಡಿಸಲು ಹೋದ ಮತ್ತೊಬ್ಬ ಸಿಬ್ಬಂದಿ ರಾಮು ಎಂಬುವರ ಮೇಲೂ ನಟರಾಜ್ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News