ಕೋಮುವಾದಿ ಕೂಟಕ್ಕೆ ತೀವ್ರ ಮುಖಭಂಗ

Update: 2018-11-07 18:53 GMT

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿರುವ ಕೇಂದ್ರದ ಅಧಿಕಾರ ಸೂತ್ರ ಹಿಡಿದ ಬಿಜೆಪಿಗೆ ಕರ್ನಾಟಕದ ಜನರು ಉಪಚುನಾವಣೆಗಳಲ್ಲಿ ತೀವ್ರ ಆಘಾತ ನೀಡಿದ್ದಾರೆ. ಬಳ್ಳಾರಿ, ಮಂಡ್ಯ ಲೋಕಸಭಾ ಮತಕ್ಷೇತ್ರಗಳಲ್ಲಿ ಮತ್ತು ಜಮಖಂಡಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಜನತೆ ನೀಡಿದ ಆದೇಶ ಸಾಮಾನ್ಯವಾದುದಲ್ಲ, ಜಾತ್ಯತೀತ ಪಕ್ಷಗಳು ಒಂದುಗೂಡಿದರೆ ಕರಾಳ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಸಾಧ್ಯ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ. ಹಣದ ಬಲದಿಂದ ಬಳ್ಳಾರಿ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆಂದು ದುರಹಂಕಾರದಿಂದ ಮೆರೆಯುತ್ತಿದ್ದ ರೆಡ್ಡಿ, ರಾಮುಲು ಕೂಟಕ್ಕೂ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅಲ್ಲಿ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪನವರು ತಮ್ಮ ಬಿಜೆಪಿ ಎದುರಾಳಿಯನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಡಿಯೂರಪ್ಪರ ಪುತ್ರ ಬಿ. ವೈ. ರಾಘವೇಂದ್ರ ಅತ್ಯಂತ ಪ್ರಯಾಸ ಪಟ್ಟು ಗೆದ್ದಿದ್ದಾರೆ. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳು ಕೊಂಚ ಮುನ್ನೆಚ್ಚರಿಕೆ ವಹಿಸಿ ಪೂರ್ವಸಿದ್ಧತೆ ಮಾಡಿಕೊಂಡು ಸ್ಪರ್ಧಿಸಿದ್ದರೆ ಅಲ್ಲೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿತ್ತು.

ಈ ಉಪ ಚುನಾವಣೆ ಫಲಿತಾಂಶದಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಜನ ರೋಸಿ ಹೋಗಿದ್ದಾರೆ. ಜನರಿಗೆ ಬದಲಾವಣೆ ಬೇಕಾಗಿದೆ. ಜಾತ್ಯತೀತ ಪಕ್ಷಗಳು ಒಂದುಗೂಡಿ ಪ್ರತಿರೋಧ ಒಡ್ಡಿದರೆ ಜನರು ಬೆಂಬಲ ನೀಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಈ ಗೆಲುವಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡರ ಪಾತ್ರ ಮುಖ್ಯವಾಗಿದೆ. ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇವರೆಲ್ಲ ಒಮ್ಮನಸ್ಸಿನಿಂದ ದುಡಿದು ಬಿಜೆಪಿಯನ್ನು ಸೋಲಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜಾತ್ಯತೀತ ಪಕ್ಷಗಳು ಒಂದಾಗಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿವೆ.

ಕರ್ನಾಟಕದಲ್ಲಿ ಸೋಲಿನ ಕಿರೀಟವನ್ನು ಬಿಜೆಪಿಯ ರಾಜ್ಯನಾಯಕರ ತಲೆಯ ಮೇಲಿಡಲು ಆ ಪಕ್ಷದ ರಾಷ್ಟ್ರೀಯ ನಾಯಕರು ಯತ್ನಿಸುತ್ತಿದ್ದಾರೆ. ಅದರಲ್ಲೂ ಯಡಿಯೂರಪ್ಪನವರೇ ಸೋಲಿಗೆ ಕಾರಣ ಎಂದು ಬಿಜೆಪಿಯ ಒಂದು ಗುಂಪು ಬಿಂಬಿಸುತ್ತಿದೆ. ಆದರೆ ವಾಸ್ತವವಾಗಿ ಈ ಸೋಲಿನ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೊತ್ತುಕೊಳ್ಳಬೇಕಾಗಿದೆ. ಇವರಷ್ಟೆ ಅಲ್ಲ, ಕೇಂದ್ರ ಸರಕಾರವನ್ನು ತೆರೆಮರೆಯಲ್ಲಿದ್ದು ನಿಯಂತ್ರಿಸುತ್ತಿರುವ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರವಾದ ಆರೆಸ್ಸೆಸ್ ಕೂಡ ಬಿಜೆಪಿ ಸೋಲಿಗೆ ಕಾರಣ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 31ರಷ್ಟು ಮತ ಪಡೆದು ದೇಶದ ಅಧಿಕಾರ ಸೂತ್ರ ಹಿಡಿದ ನರೇಂದ್ರ ಮೋದಿಯನ್ನು ಒಂದೆಡೆ ಕಾರ್ಪೊರೇಟ್ ಬಂಡವಾಳಶಾಹಿ, ಇನ್ನೊಂದೆಡೆ ನಾಗಪುರದ ಆರೆಸ್ಸೆಸ್ ಎಂಬ ಸಂವಿಧಾನೇತರ ಅಧಿಕಾರ ಕೇಂದ್ರಗಳು ನಿಯಂತ್ರಿಸುತ್ತ ಬಂದವು. ಇವೆಲ್ಲದರ ಜೊತೆಗೆ ಮೋದಿಯಲ್ಲಿದ್ದ ಸರ್ವಾಧಿಕಾರಿ ವ್ಯಕ್ತಿತ್ವವೂ ಆಡಳಿತದ ಮೇಲೆ ಪರಿಣಾಮ ಬೀರಿತು. ಈ ದೇಶ ಕಳೆದ ಎಪ್ಪತ್ತು ವರ್ಷಗಳಲ್ಲಿ ಸಾಧಿಸಿದ್ದನ್ನು ಕೇವಲ ನಾಲ್ಕೂವರೆ ವರ್ಷಗಳಲ್ಲಿ ಹಾಳು ಮಾಡಿದ ಈ ಸರಕಾರ ಜನತೆಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ. ಬದಲಾಗಿ ಜನಸಾಮಾನ್ಯರನ್ನು ಇನ್ನಷ್ಟು ಸಂಕಟದ ಸಾಗರಕ್ಕೆ ನೂಕಿತು. ಗೊತ್ತು ಗುರಿಯಿಲ್ಲದೆ ಕೈಗೊಂಡ ನೋಟು ಅಮಾನ್ಯೀಕರಣದಂತಹ ಕ್ರಮಗಳು ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸಿದವು.

ಅಪನಗದೀಕರಣವಾದಾಗ ಬ್ಯಾಂಕ್ ಎಟಿಎಂ ಎದುರು ಕ್ಯೂ ನಿಂತು ಎಷ್ಟೋ ಜನರು ಅಸುನೀಗಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಿಸಲು ಆಗಲಿಲ್ಲ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹತ್ತು ಲಕ್ಷ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಅಷ್ಟೇ ಅಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಗಳು ನಿಯಂತ್ರಣಕ್ಕೆ ಬರಲಿಲ್ಲ. ಉದ್ಯೋಗದ ಬಗ್ಗೆ ಕೇಳಿದರೆ ‘‘ಪಕೋಡಾ ಮಾರಾಟ ಮಾಡಿ ಬದುಕಿ’’ ಎಂಬ ಉಪದೇಶ ಪ್ರಧಾನಿಯಿಂದ ಬಂತು. ಒಂದೆಡೆ ಭಾರೀ ಬಂಡವಾಳಗಾರರಿಗೆ ರಿಯಾಯಿತಿ ಮೇಲೆ ರಿಯಾಯಿತಿ ನೀಡುತ್ತ ಬಂದ ಸರಕಾರ ಜನಸಾಮಾನ್ಯರ ನೋವಿಗೆ ಸ್ಪಂದಿಸಲಿಲ್ಲ, ಅಧಿಕಾರಕ್ಕೆ ಬಂದಾಗ ‘‘ನಾನೂ ತಿನ್ನುವುದಿಲ್ಲ ಇತರರಿಗೂ ತಿನ್ನಲು ಬಿಡುವುದಿಲ್ಲ’’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಲಲಿತ್ ಮೋದಿ, ನೀರವ್ ಮೋದಿ, ವಿಜಯ ಮಲ್ಯ ಮೊದಲಾದ ಉದ್ಯಮಪತಿಗಳು ಸಾರ್ವಜನಿಕ ಬ್ಯಾಂಕುಗಳಿಂದ ಲಕ್ಷಾಂತರ ಕೋಟಿ ರೂ. ದೋಚಿಕೊಂಡು ವಿದೇಶಕ್ಕೆ ಪಲಾಯನ ಮಾಡಲು ಈ ಸರಕಾರ ಅವಕಾಶ ನೀಡಿತು. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಯೋಜನಾ ಆಯೋಗ ರದ್ದುಗೊಳಿಸಿ ನೀತಿ ಆಯೋಗ ಮಾಡಿತು. ಇತ್ತೀಚೆಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವನ್ನು ರದ್ದುಗೊಳಿಸಿತು. ಉನ್ನತ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿ ಎರಡು ಗುಂಪುಗಳನ್ನು ಮಾಡಿ ಅದರಲ್ಲಿ ಹಸ್ತಕ್ಷೇಪ ಮಾಡಿತು. ನ್ಯಾಯಾಂಗ, ಕಾರ್ಯಾಂಗಗಳ ಪ್ರತಿಷ್ಠೆಯನ್ನು ಹಾಳು ಮಾಡಿತು. ಈ ರೀತಿ ಸಾಂವಿಧಾನಿಕ ಆಡಳಿತ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು. ದನ ರಕ್ಷಣೆ ಹೆಸರಿನಲ್ಲಿ ಗೂಂಡಾ ಗ್ಯಾಂಗುಗಳು ಅಮಾಯಕರನ್ನು ಕೊಂದು ಹಾಕಲು ಅವಕಾಶ ನೀಡಿತು. ಈಗ ಸಂವಿಧಾನವನ್ನೇ ಬದಲಿಸಿ ಮನುವಾದವನ್ನು ದೇಶದ ಮೇಲೆ ಹೇರುವ ಸಂಚು ನಡೆಸಿದೆ. ಮತ್ತೆ ಮೋದಿ ನಾಯಕತ್ವದ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಏಕತೆ ಸಮಗ್ರತೆ ಮತ್ತು ಸಂವಿಧಾನಗಳಿಗೆ ಗಂಡಾಂತರ ಎದುರಾಗಲಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನತೆ ನೀಡಿದ ತೀರ್ಪು ಚಾರಿತ್ರಿಕವಾಗಿದೆ. ಜಾತ್ಯತೀತ, ಪ್ರಗತಿಪರ ಶಕ್ತಿಗಳು ಒಂದುಗೂಡಿದರೆ ಈ ಫ್ಯಾಶಿಸ್ಟ್ ಕೋಮುವಾದಿ ಕೂಟವನ್ನು ಸೋಲಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News