ಪ್ರಗತಿಪರ ಪಥಕ್ಕೆ ಒತ್ತು, ಸ್ಥಾನ ನಷ್ಟಕ್ಕೆ ಹೆದರೆನು: ಪಿಣರಾಯಿ

Update: 2018-11-08 03:41 GMT

ತಿರುವನಂತಪುರ, ನ.8: "ಶಬರಿಮಲೆ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗೆ ಜಗ್ಗದೆ, ಕೇರಳವನ್ನು ಪ್ರಗತಿಪಥದಲ್ಲಿ ಮುನ್ನಡೆಸುವುದಷ್ಟೇ ನನ್ನ ಆದ್ಯತೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಈ ಮಾರ್ಗದಲ್ಲಿ ಕೆಲವು ಸ್ಥಾನಗಳನ್ನು ಅಥವಾ ಮತಗಳನ್ನು ಕಳೆದುಕೊಂಡರೂ ಹೆದರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇರಳದಲ್ಲಿ ಕೆಲ ವ್ಯಕ್ತಿಗಳು ಕೋಮು ವಿಭಜನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.

"ಕೇರಳದ ಏಕೈಕ ಆದ್ಯತೆ ಎಂದರೆ ಅಭಿವೃದ್ಧಿಶೀಲ ಮತ್ತು ಪ್ರಗತಿಪರ ಪಥ. ಇದಕ್ಕಾಗಿ ಕೆಲ ಸ್ಥಾನಗಳು ಅಥವಾ ಮತಗಳನ್ನು ಕಳೆದುಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ... ಜನ ಯಾವುದೇ ಭೇದ ಭಾವ ಇಲ್ಲದೇ ಪರಸ್ಪರ ಮನುಷ್ಯರಂತೆ ಕಾಣುವ ಪ್ರಗತಿಪರ ಕೇರಳವನ್ನು ಬಲಿಕೊಡಲು ನಾವು ಸಿದ್ಧರಿಲ್ಲ" ಎಂದು ಹೇಳಿದ್ದಾರೆ.

ಕೆಲ ಮತಗಳ ಆಸೆಗಾಗಿ ಕೇರಳವನ್ನು ಹಿಂದಕ್ಕೆ ತಳ್ಳುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಬುಧವಾರ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ನಿರ್ದಿಷ್ಟ ಕೆಲ ವ್ಯಕ್ತಿಗಳು ಕೇರಳದಲ್ಲಿ ಕೋಮು ವಿಭಜನೆಗೆ ಹುನ್ನಾರ ನಡೆಸಿದ್ದಾರೆ. ನಂಬಿಕೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ನಾವು ಈ ವಿಭಜನೆಗೆ ಅವಕಾಶ ನೀಡುವುದಾದರೆ, ಇಂದಿನ ಕೇರಳ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ" ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News