ಬಿಜೆಪಿ ವಿರುದ್ಧ ರಣತಂತ್ರ: ನಾಳೆ ನಾಯ್ಡು- ಸ್ಟಾಲಿನ್ ಭೇಟಿ

Update: 2018-11-08 03:57 GMT

ಚೆನ್ನೈ, ನ.8: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪಣ ತೊಟ್ಟಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ವಿರೋಧ ಪಕ್ಷಗಳ ಮೈತ್ರಿಕೂಟ ರಚಿಸುವ ಪ್ರಯತ್ನ ಮುಂದುವರಿಸಿದ್ದು, ಶುಕ್ರವಾರ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ವಾಲಿನ್ ಅವರನ್ನು ಭೇಟಿ ಮಾಡಲಿದ್ದಾರೆ.

ಸ್ಟಾಲಿನ್ ಅವರ ನಿವಾಸದಲ್ಲಿ ಶುಕ್ರವಾರ ಸಂಜೆ ಉಭಯ ಮುಖಂಡರ ಮಾತುಕತೆ ನಡೆಯಲಿದೆ ಎಂದು ಡಿಎಂಕೆ ಮೂಲಗಳು ಹೇಳಿವೆ.

ಪಕ್ಷದ ಖಜಾಂಚಿ ಎಸ್.ದೊರೈಮುರುಗನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಬಾಲು ಮತ್ತಿತರರು ಈ ಚರ್ಚೆಯಲ್ಲಿ ಭಾಗವಹಿಸುವರು. "ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲಿ ಡಿಎಂಕೆ ಪಾಲ್ಗೊಳ್ಳಲಿದೆ ಎಂದು ನಮ್ಮ ತಲೈವಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ" ಎಂದು ಹಿರಿಯ ಡಿಎಂಕೆ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

ನಾಯ್ಡು ಕಳೆದ ವಾರ ದೆಹಲಿಯಲ್ಲಿ ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಈಗಾಗಲೇ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಟಿಡಿಪಿ ಮುಖಂಡ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಸ್ಟಾಲಿನ್ ಕೂಡಾ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದರು. ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಕೂಟದಲ್ಲಿ ಸೇರಿಸುವ ಪ್ರಯತ್ನ ಮುಂದುವರಿಸುವುದಾಗಿ ನಾಯ್ಡು ಹೇಳಿದ್ದಾರೆ.

"ನಾಯ್ಡು ಈಗಾಗಲೇ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಮತ್ತು ಸೀತಾರಾಂ ಯೆಚೂರಿ, ಸಿಪಿಐ ರಾಷ್ಟ್ರೀಯ ಮುಖಂಡರು, ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ಸಂಸ್ಥಾಪಕ ಎಚ್.ಡಿ.ದೇವೇಗೌಡ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದು, ಸದ್ಯದಲ್ಲೇ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿ ಮೈತ್ರಿಕೂಟದಲ್ಲಿ ಅವರ ಪಕ್ಷವನ್ನು ಸೇರಿಸುವ ಪ್ರಯತ್ನ ನಡೆಸಲಿದ್ದಾರೆ" ಎಂದು ಡಿಎಂಕೆ ನಾಯಕ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News