ನಗದು ವಶಪಡಿಸಿಕೊಳ್ಳುವುದು ನೋಟ್ ಬ್ಯಾನ್ ಉದ್ದೇಶವಾಗಿರಲಿಲ್ಲ: ಅರುಣ್ ಜೇಟ್ಲಿ

Update: 2018-11-08 14:27 GMT

ಹೊಸದಿಲ್ಲಿ,ನ.8: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ನೋಟು ನಿಷೇಧ ಕ್ರಮಕ್ಕೆ ಈಗ ಭರ್ತಿ ಎರಡು ವರ್ಷ. ಪ್ರತಿಪಕ್ಷಗಳಿಂದ ಸರಕಾರದ ವಿರುದ್ಧ ಟೀಕಾಪ್ರಹಾರ ಮತ್ತು ನೋಟು ನಿಷೇಧ ಕ್ರಮ ಕೈಗೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕ್ಷಮೆಯನ್ನು ಯಾಚಿಸಬೇಕೆಂಬ ಆಗ್ರಹಗಳ ನಡುವೆಯೇ ವಿತ್ತಸಚಿವ ಅರುಣ್ ಜೇಟ್ಲಿಯವರು ನೋಟು ನಿಷೇಧವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಮೋದಿಯವರು 2016,ನ,8ರಂದು 1,000 ಮತ್ತು 5,00 ರೂ.ಗಳ ನೋಟುಗಳನ್ನು ನಿಷೇಧಿಸಿದ್ದನ್ನು ‘‘ಆರ್ಥಿಕತೆಯನ್ನು ಕ್ರಮಬದ್ಧಗೊಳಿಸಲು ಸರಕಾರವು ಕೈಗೊಂಡ ಮಹತ್ವದ ನಿರ್ಧಾರಗಳ ಸರಣಿಯಲ್ಲಿ ನಿರ್ಣಾಯಕ ಹೆಜ್ಜೆಯಾಗಿತ್ತು’’ ಎಂದು ಜೇಟ್ಲಿ ಗುರುವಾರ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಣ್ಣಿಸಿದ್ದಾರೆ.

 ಬಿಜೆಪಿ ನೇತೃತ್ವದ ಸರಕಾರದ ನಾಲ್ಕು ವರ್ಷಗಳ ಆಡಳಿತದ ಅವಧಿಯಲ್ಲಿ ಮೇ,2014ರಲ್ಲಿ 3.8 ಕೋ.ಗಳಷ್ಟಿದ್ದ ಆದಾಯ ತೆರಿಗೆ ಪರಿಶೋಧನೆಗೊಳಪಟ್ಟವರ ಸಂಖ್ಯೆ 6.86 ಕೋ.ಗೇರಿಕೆಯಾಗಿದೆ ಎಂದು ‘ನೋಟು ನಿಷೇಧದ ಪರಿಣಾಮ’ ಶೀರ್ಷಿಕೆಯ ತನ್ನ ಪೋಸ್ಟ್‌ನಲ್ಲಿ ಹೇಳಿರುವ ಜೇಟ್ಲಿ,ಈ ಸರಕಾರವು ತನ್ನ ಮೊದಲ ಐದು ವರ್ಷಗಳನ್ನು ಪೂರ್ಣಗೊಳಿಸುವ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೋಟು ನಿಷೇಧ ಕ್ರಮವು ತೆರಿಗೆ ವಂಚನೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ನೆರವಾಗಿದೆ ಮತ್ತು ತೆರಿಗೆ ಸಂಗ್ರಹ ಏರಿಕೆಯಿಂದ ಗಳಿಸಿದ ಹೆಚ್ಚುವರಿ ಸಂಪನ್ಮೂಲಗಳನ್ನು ಮೂಲಸೌಕರ್ಯ,ಸಾಮಾಜಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹಾಗೂ ಬಡವರ ಏಳ್ಗೆಗಾಗಿ ಬಳಸಲಾಗಿದೆ ಎಂದಿದ್ದಾರೆ.

ಶೇ.99.3ರಷ್ಟು ನಿಷೇಧಿತ ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದ ಬಳಿಕ ಸರಕಾರದ ವಿರುದ್ಧ ಮಾಡಲಾಗಿದ್ದ ಭಾರೀ ಟೀಕೆಗಳನ್ನು ತಳ್ಳಿಹಾಕಿರುವ ಜೇಟ್ಲಿ,ಹೆಚ್ಚುಕಡಿಮೆ ಎಲ್ಲ ನಿಷೇಧಿತ ನೋಟುಗಳು ಬ್ಯಾಂಕುಗಳಲ್ಲಿ ಠೇವಣಿಯಾಗಿವೆ. ಎನ್ನುವುದು ನೋಟು ನಿಷೇಧ ಕುರಿತು,ತಪ್ಪುಗ್ರಹಿಕೆಗಳಿಂದ ಕೂಡಿದ ಟೀಕೆಯಾಗಿತ್ತು. ನೋಟುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ನೋಟು ನಿಷೇಧದ ಉದ್ದೇಶವಾಗಿರಲಿಲ್ಲ. ವ್ಯವಸ್ಥೆಯಿಂದ ಹೊರಗಿದ್ದ ಹಣವನ್ನು ಕ್ರಮಬದ್ಧ ಆರ್ಥಿಕತೆಯೊಳಗೆ ತರುವುದು ಮತ್ತು ಅವುಗಳನ್ನು ಹೊಂದಿದ್ದವರು ತೆರಿಗೆಯನ್ನು ತೆರುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು ಎಂದಿದ್ದಾರೆ.

ಭಾರತವು ನಗದು ವಹಿವಾಟಿನಿಂದ ಡಿಜಿಟಲ್ ವಹಿವಾಟಿನತ್ತ ಹೊರಳಿಕೊಳ್ಳಲು ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಅಗತ್ಯವಾಗಿತ್ತು ಮತ್ತು ಅದು ಹೆಚ್ಚಿನ ತೆರಿಗೆ ಆದಾಯ ಸಂಗ್ರಹಣೆ ಮತ್ತು ತೆರಿಗೆ ವ್ಯಾಪ್ತಿಯ ವಿಸ್ತರಣೆಗೆ ನೆರವಾಯಿತು ಎಂದು ಅವರು ಹೇಳಿದ್ದಾರೆ.

ಬೇನಾಮಿ ವಹಿವಾಟುಗಳು ಮತ್ತು ತೆರಿಗೆ ವಂಚನೆಗೆ ಬಳಕೆಯಾಗುತ್ತಿದ್ದ ಎಲ್ಲ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸುವುದನ್ನು ನೋಟು ನಿಷೇಧ ಕ್ರಮವು ಅನಿವಾರ್ಯವಾಗಿಸಿತ್ತು ಎಂದು ಪ್ರತಿಪಾದಿಸಿರುವ ಜೇಟ್ಲಿ,ಭಾರೀ ಮೊತ್ತದ ಹಣದ ಠೇವಣಿಯ ಬಳಿಕ 17.42 ಲಕ್ಷ ಶಂಕಿತ ಖಾತೆದಾರರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಮತ್ತು ಅವರು ನುಣುಚಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಅವರಿಂದ ಆನ್‌ಲೈನ್‌ನಲ್ಲಿ ವಿವರಣೆಗಳನ್ನು ಪಡೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದವರು ಶಿಸ್ತುಕ್ರಮಗಳನ್ನು ಎದುರಿಸುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಠೇವಣಿಯಾದ ಹಣವು ಬ್ಯಾಂಕುಗಳು ತಮ್ಮ ಸಾಲ ನೀಡಿಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೆರವಾಗಿದೆ, ಬಹಳಷ್ಟು ಹಣ ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆಯಾಗಿದೆ ಎಂದಿದ್ದಾರೆ.

ಡಿಜಿಟಲ್ ವಹಿವಾಟುಗಳಲ್ಲಿ ಏರಿಕೆಯಾಗಿದ್ದು,ದೇಶಿಯವಾಗಿ ಅಭಿವೃದ್ಧಿಗೊಂಡ ಯುಪಿಐ ಮತ್ತು ರುಪೇ ಕಾರ್ಡ್‌ನಿಂದಾಗಿ ವಿಸಾ ಮತ್ತು ಮಾಸ್ಟರ್ ಕಾರ್ಡ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಪಾಲು ಕಳೆದುಕೊಳ್ಳುತ್ತಿವೆ ಎಂದಿರುವ ಜೇಟ್ಲಿ,ನೋಟು ನಿಷೇಧ ಮತ್ತು ಜಿಎಸ್‌ಟಿ ನಗದು ವಹಿವಾಟುಗಳನ್ನು ಭಾರೀ ಪ್ರಮಾಣದಲ್ಲಿ ನಿರ್ಬಂಧಿಸಿವೆ ಎಂದೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News