ಗ್ರಾಹಕರಿಗೆ ‘ವಂಚನೆ’: ರಾಜ್ಯಾದ್ಯಂತ 695 ಆಭರಣ ಅಂಗಡಿಗಳ ಮೇಲೆ ದಾಳಿ
ಬೆಂಗಳೂರು, ನ. 8: ರಾಜ್ಯಾದ್ಯಂತ ಚಿನ್ನ-ಬೆಳ್ಳಿ ಆಭರಣ ಮಾರಾಟ ಮಳಿಗೆಗಳು ಹಾಗೂ ವರ್ತಕರ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ತಪ್ಪಿತಸ್ಥರ ವಿರುದ್ಧ 172 ಮೊಕದ್ದಮೆ ದಾಖಲಿಸಿ 1.29 ಲಕ್ಷ ರೂ.ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಮಣಪುರಂ ಜ್ಯುವೆಲರ್ಸ್, ರಾಜ್ ಡೈಮಂಡ್ಸ್, ಸುಲ್ತಾನ್ ಗೋಲ್ಡ್ ಮತ್ತು ಡೈಮಂಡ್ಸ್, ನವರತ್ ಜ್ಯುವೆಲರ್ಸ್, ಗಣೇಶ್ ಜ್ಯುವೆಲರ್ಸ್, ಶಿವಮೊಗ್ಗ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಉಡುಪಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಲಾಗಿದೆ.
ಒಟ್ಟಾರೆ ರಾಜ್ಯಾದ್ಯಂತ 695 ಅಂಗಡಿಗಳ ಮೇಲೆ ತಪಾಸಣೆ ನಡೆಸಿದ್ದು, 172 ಮೊಕದ್ದಮೆ ದಾಖಲು ಮಾಡಲಾಗಿದೆ. ಅಲ್ಲದೆ, ಒಟ್ಟು 1,29,500 ರೂ. ದಂಡ ವಿಧಿಸಲಾಗಿದೆ. ನ.5 ಮತ್ತು 6ರಂದು ಏಕಕಾಲಕ್ಕೆ ಜ್ಯುವೆಲರ್ಸ್ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಚಿನ್ನ-ಬೆಳ್ಳಿ ಖರೀದಿ ಸಮಯದಲ್ಲಿ ವ್ಯಾಪಾರಸ್ಥರು ವಂಚನೆ ಮಾಡುವ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ದೂರವಾಣಿ ಸಂಖ್ಯೆ-2225 3500, 2226 0554 ಅಥವಾ clm-lm-ka@inc.in ಇ-ಮೇಲ್ ವಿಳಾಸಕ್ಕೆ ದೂರು ನೀಡಲು ಕೋರಿದೆ.