×
Ad

ಸಂವಿಧಾನ-ಪ್ರಜಾಪ್ರಭುತ್ವ ರಕ್ಷಣೆ ನಮ್ಮ ಆದ್ಯತೆ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

Update: 2018-11-08 19:16 IST

ಬೆಂಗಳೂರು, ನ.8: ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಲು ಜಾತ್ಯತೀತ ಹಾಗೂ ಸಮಾನ ಮನಸ್ಕ ಪಕ್ಷಗಳು ಒಂದಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅಭಿಪ್ರಾಯಪಟ್ಟರು.

ಗುರುವಾರ ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗಿನಿಂದಲೂ ನಾನು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ದೇವೇಗೌಡ, ಕುಮಾರಸ್ವಾಮಿ ಹಾಗೂ ನಮ್ಮಂತಹವರು ಎಲ್ಲರೂ ಒಗ್ಗಟ್ಟಾಗಿ ದೇಶ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕಿದೆ ಎಂದು ಅವರು ಹೇಳಿದರು.

ಸಿಬಿಐ, ಆರ್‌ಬಿಐ, ಇಡಿ, ಐಟಿ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳು ಆತಂಕದ ಪರಿಸ್ಥಿತಿಯಲ್ಲಿವೆ. ಕೇಂದ್ರ ಸರಕಾರ ಸೃಷ್ಟಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ತನ್ನಿಂದ ಸಾಧ್ಯವಿಲ್ಲ. ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆರ್‌ಬಿಐ ಗವರ್ನರ್ ಗಡುವು ನೀಡಿರುವುದಾಗಿ ಮಾಧ್ಯಮಗಳ ವರದಿಗಳು ತಿಳಿಸಿವೆ ಎಂದು ಅವರು ಹೇಳಿದರು.

ಇಡಿ, ಐಟಿ ಸಂಸ್ಥೆಗಳನ್ನು ವಿಪಕ್ಷಗಳನ್ನು ನಿಯಂತ್ರಿಸಲು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಬಿಹಾರ, ಗುಜರಾತ್ ಸೇರಿದಂತೆ ಎಲ್ಲೆಡೆಯೂ ಇದೇ ತಂತ್ರವನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ. ವಿರೋಧ ಪಕ್ಷದ ನಾಯಕರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಚಂದ್ರಬಾಬು ನಾಯ್ಡು ದೂರಿದರು.

ರಫೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಈವರೆಗೆ ಉತ್ತರ ನೀಡಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ . ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಪಸಂಖ್ಯಾತರು ಅಭದ್ರತೆಯ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಅವರು ಟೀಕಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ವಿಚಾರದಲ್ಲಿ ನನ್ನ ಆಸಕ್ತಿಯಿಲ್ಲ. ದೇಶ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡಬೇಕೆಂಬುದು ಮಾತ್ರ ನನ್ನ ಉದ್ದೇಶ. ದಿಲ್ಲಿಯಲ್ಲಿರುವ ಮಾಧ್ಯಮಗಳು ಮುಕ್ತವಾಗಿ ವರದಿ ಮಾಡುವ ಸ್ಥಿತಿಯಲ್ಲಿ ಇಲ್ಲ. ದೇಶದ ಎದುರು ಸತ್ಯವನ್ನು ತಿಳಿಸಬೇಕಾದ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂದು ಅವರು ದೂರಿದರು.

ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು ನಾವು ಆನಂತರ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ವಿಪಕ್ಷ. ಅವರ ಸಹಕಾರ ನಮಗೆ ಅಗತ್ಯವಿದೆ. ಈ ಹಿಂದೆ ದೇವೇಗೌಡರ ನೇತೃತ್ವದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿತ್ತು ಎಂದು ಅವರು ಹೇಳಿದರು.

ಬಿಎಸ್ಪಿ ವರಿಷ್ಠೆ ಮಾಯಾವತಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆ ಚರ್ಚೆ ಮಾಡಿದ್ದೇನೆ. ನಾಳೆ ತಮಿಳುನಾಡಿನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಜೊತೆ ಮಾತುಕತೆ ನಡೆಸುತ್ತೇನೆ. ಒಂದು ಪ್ರಮುಖವಾದ ಉದ್ದೇಶಕ್ಕಾಗಿ ನಾವು ಎಲ್ಲರನ್ನೂ ಭೇಟಿ ಮಾಡಿ ಚರ್ಚೆ ಮಾಡುತ್ತಿದ್ದೇವೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸೌಲಭ್ಯಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರಮೋದಿ ಮಾಡಿದ್ದ ವಾಗ್ದಾನ ಈಡೇರಿಸದೆ ಇದ್ದುದ್ದರಿಂದ, ನಾವು ಎನ್‌ಡಿಎಗೆ ನೀಡಿದ್ದ ಬೆಂಬಲ ಹಿಂಪಡೆದೆವು. ಅಲ್ಲದೆ, ನಮ್ಮ ಕೇಂದ್ರ ಸಚಿವರಿಂದಲೂ ರಾಜೀನಾಮೆ ಕೊಡಿಸಿದೆವು ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯ ಫಲಿತಾಂಶವನ್ನು ನೋಡಿದರೆ, ದೇಶದ ಜನರ ಮನಸ್ಥಿತಿ ಅರ್ಥವಾಗುತ್ತದೆ. ಸಾಮಾನ್ಯ ಜನರಷ್ಟೇ ಅಲ್ಲ, ಎನ್‌ಡಿಎ ಸರಕಾರದ ಆಡಳಿತದಿಂದ ಮಾಧ್ಯಮಗಳು ಬೇಸತ್ತಿವೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು.

ಮುಂದಿನ ಜನವರಿಯಲ್ಲಿ ಮಮತಾ ಬ್ಯಾನರ್ಜಿ ಬೃಹತ್ ರ್ಯಾಲಿ ಆಯೋಜನೆ ಮಾಡಿದ್ದಾರೆ. ಅದೇ ರೀತಿ, ಕುಮಾರಸ್ವಾಮಿ ರೈತರ ಸಮಾವೇಶವನ್ನು ಮಾಡಲಿದ್ದಾರೆ. ಇದೊಂದು ಆರಂಭಿಕ ಪ್ರಯತ್ನವಾಗಿದ್ದು, ನಾವು ಯಶಸ್ಸು ಗಳಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News