ಜನಾರ್ದನ ರೆಡ್ಡಿ ಪ್ರಕರಣದ ಕುರಿತು ಪ್ರತಿಕ್ರಿಯಿಸಲ್ಲ: ಸಿಎಂ ಕುಮಾರಸ್ವಾಮಿ

Update: 2018-11-08 13:49 GMT

ಬೆಂಗಳೂರು, ನ.8: ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸಿಸಿಬಿ ಅಧಿಕಾರಿಗಳು ಕೈಗೊಂಡಿರುವ ತನಿಖೆ ವಿಚಾರದಲ್ಲಿ ನಾನು ಬಹಿರಂಗವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಸಂಸ್ಥೆಯೊಂದು ಬೆಂಗಳೂರು ನಗರದಲ್ಲಿ ಹಲವಾರು ಅಲ್ಪಸಂಖ್ಯಾತರ ಸಣ್ಣಪುಟ್ಟ ಕುಟುಂಬಗಳಿಂದ ಹಣ ಸಂಗ್ರಹ ಮಾಡಿ, ಬಡವರ ಹಣ ಲೂಟಿ ಮಾಡಿ, ಬೀದಿಗೆ ತಂದು ನಿಲ್ಲಿಸಿದೆ ಎಂದು ಕೆಲವರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದರು.

ತನಿಖೆ ಹಂತದಲ್ಲಿ ಹಲವಾರು ರೀತಿಯ ಮಾಹಿತಿಗಳನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ. ಆ ಕಂಪೆನಿಯ ಹಿನ್ನೆಲೆ ಮತ್ತು ಆ ಕಂಪೆನಿಯ ಹಣಕಾಸಿನ ವಹಿವಾಟು ಬಗ್ಗೆ ಸಂಬಂಧಪಟ್ಟ ವಿಷಯಗಳಲ್ಲಿ, ಹಲವಾರು ಪ್ರಮುಖವಾದ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಇರುವ ಮಾಹಿತಿ ಇದ್ದು, ಕಾನೂನು ಬಾಹಿರವಾಗಿ ನಡೆದಿರುವ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ನಾನು ಪೊಲೀಸ್ ಇಲಾಖೆಗೆ ಮುಕ್ತವಾದ ಅವಕಾಶ ನೀಡಿದ್ದೇನೆ. ಇದರಲ್ಲಿ ದ್ವೇಷ ರಾಜಕಾರಣಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಯಾರಿಗೂ ತೊಂದರೆ ನೀಡಬೇಕೆಂಬ ಉದ್ದೇಶ ಸರಕಾರಕ್ಕಿಲ್ಲ. ಇದು ಸಾರ್ವಜನಿಕರಿಗೆ ಆಗಿರುವ ವಂಚನೆಯ ಘಟನೆ ಕುರಿತು ಸಲ್ಲಿಕೆಯಾಗಿರುವ ದೂರಿನ ಮೇರೆಗೆ ತನಿಖೆ ನಡೆಯುತ್ತಿರುವಾಗ, ಬಹಿರಂಗವಾಗಿ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳ ನೇಮಕಾತಿ ಕುರಿತು ಕಾಂಗ್ರೆಸ್ ನಾಯಕರು ಹಾಗೂ ನಾವು ಸಮನ್ವಯ ಸಮಿತಿ ಸಭೆಯಲ್ಲಿ ಕೂತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News