ಜಾತ್ಯತೀತ ಪಕ್ಷಗಳ ಶಕ್ತಿ ತೋರಿಸುವ ಸಮಯ ಬಂದಿದೆ: ಎಚ್.ಡಿ ದೇವೇಗೌಡ
ಬೆಂಗಳೂರು, ನ.8: ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಪಕ್ಷಗಳ ಶಕ್ತಿ ತೋರಿಸುವ ಸಮಯ ಬಂದಿದ್ದು, ಬಿಎಸ್ಪಿ ವರಿಷ್ಠೆ ಮಾಯಾವತಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೇರಿದಂತೆ ಎಲ್ಲರೂ ಒಂದಾಗಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ಕಿತ್ತೊಗೆಯಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಗುರುವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಜೊತೆ ನಡೆದ ಮಹತ್ವದ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಕ್ಕಾಗಿ ಚಂದ್ರಬಾಬು ನಾಯ್ಡು ಶ್ರಮಿಸುತ್ತಿದ್ದಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಜಾತ್ಯತೀತ ಪಕ್ಷಗಳು ಒಂದಾಗಿ ಯಾವ ರೀತಿಯ ರಣತಂತ್ರ ರೂಪಿಸಬೇಕು ಎಂಬುದರ ಕುರಿತು ಚರ್ಚೆ ಮಾಡಲಾಗಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ದೊಡ್ಡ ಜವಾಬ್ದಾರಿಯಿದೆ ಎಂದು ಅವರು ಹೇಳಿದರು.
ಎನ್‌ಡಿಎ ಸರಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ಅಧೀರರನ್ನಾಗಿಸುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನರೇಂದ್ರಮೋದಿ ದೇಶದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ಜಾತ್ಯತೀತ ಪಕ್ಷಗಳ ಒಗ್ಗಟ್ಟಿನಿಂದ ದೇಶದಲ್ಲಿ ಹೊಸ ಅಲೆ ಸೃಷ್ಟಿಯಾಗಲಿದೆ ಎಂದು ದೇವೇಗೌಡ ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಚರ್ಚೆ ಮಾಡಲು ನಿಮ್ಮ ಪಾತ್ರ ಪ್ರಮುಖವಾದದ್ದು ಎಂದು ಚಂದ್ರಬಾಬುನಾಯ್ಡು, ದೇವೇಗೌಡರಿಗೆ ಮನವಿ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಹೊಸ ಸರಕಾರ, ಹೊಸ ವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಹೋಗಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ ಎಂದರು.
ದೇವೇಗೌಡರಿಗೆ ಇರುವ ಹಿರಿತನ, ಅವರ ರಾಜಕೀಯ ಅನುಭವದ ಮೂಲಕ ನಮ್ಮೆಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡಲಿ, ಎಲ್ಲ ಪಕ್ಷಗಳಿಗೆ ಸಲಹೆ ನೀಡಿ, ಒಂದುಗೂಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಈಗಾಗಲೆ ಚಂದ್ರಬಾಬು ನಾಯ್ಡು ಮಾತನಾಡಿದ್ದಾರೆ ಎಂದು ಅವರು ಹೇಳಿದರು.
ದೇಶದಲ್ಲಿರುವ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದು ವೇದಿಕೆಗೆ ತರಲು ಚಂದ್ರಬಾಬು ನಾಯ್ಡು ಒಬ್ಬ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಜನವರಿ ತಿಂಗಳಿನಲ್ಲಿ ಕೋಲ್ಕತ್ತಾದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಎಲ್ಲ ಪ್ರಾದೇಶಿಕ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಈ ರ್ಯಾಲಿ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.