×
Ad

ಚುನಾವಣೆ ಬಂದಾಗ ಬಿಜೆಪಿಗೆ ರಾಮಮಂದಿರ ನೆನಪಾಗುತ್ತದೆ: ಯುವ ಕಾಂಗ್ರೆಸ್

Update: 2018-11-08 19:44 IST

ಬೆಂಗಳೂರು, ನ.8: ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ರಾಮಮಂದಿರ ನೆನಪಿಗೆ ಬರುತ್ತದೆ. ನೋಟ್ ಬ್ಯಾನ್ ಸೇರಿದಂತೆ ಆಡಳಿತ ವೈಫಲ್ಯ ಮರೆಮಾಚಲು ಇದೀಗ ಬಿಜೆಪಿ ರಾಮಮಂದಿರದ ವಿಚಾರವನ್ನು ಕೈಗೆತ್ತಿಗೊಂಡಿದೆ ಎಂದು ಯುವ ಕಾಂಗ್ರೆಸ್ ಆರೋಪ ಮಾಡಿದೆ.

ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸವನಗುಡಿಯ ಶಂಕರನಾಗ್ ವೃತ್ತದಲ್ಲಿ ಗುರುವಾರ ಕರಾಳ ದಿನಾಚರಣೆ ಆಚರಿಸಿದರು. ನೋಟ್‌ ಬ್ಯಾನ್ ವಿರೋಧಿಸಿ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಹಠಾವೋ ದೇಶ್ ಬಚಾವೋ ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಾಗರಾಜ್, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರೆ ಬಡವರಿಗೆ ಹಾಗೂ ದೇಶಕ್ಕೆ ಉಳಿಗಾಲವಿಲ್ಲ . ಹೀಗಾಗಿ, ಮೋದಿ ಸರಕಾರವನ್ನು ತೊಲಗಿಸಿ ಎಂದು ಕರೆ ನೀಡಿದರು. ಉಪ ಚುನಾವಣೆಯಲ್ಲಿಯೇ ರಾಜ್ಯದ ಜನತೆ ಮೋದಿ ವಿರುದ್ಧ ನಾವಿದ್ದೇವೆ ಎನ್ನುವ ಸಂದೇಶ ನೀಡಿದ್ದಾರೆ. ಜಾತಿ, ಧರ್ಮದ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಪಾಠ ಕಲಿಸಿದ್ದಾರೆ. ಅಪವಿತ್ರ ಮೈತ್ರಿ ಎನ್ನುವ ಮೂದಲಿಕೆಗೆ ಉಪ ಚುನಾವಣೆಯಲ್ಲಿ ಜನತೆಯೇ ತೀರ್ಪು ನೀಡಿದ್ದಾರೆ, ಮೈತ್ರಿ ಸರಕಾರದ ಪರವಾಗಿ ಜನಾದೇಶ ನೀಡಿದ್ದಾರೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ವಕ್ಷೇತ್ರದಲ್ಲಿಯೇ ಪುತ್ರನನ್ನು ಗೆಲ್ಲಿಸಿಕೊಳ್ಳಲು ಪ್ರಯಾಸ ಪಡಬೇಕಾಯಿತು ಎಂದು ಟೀಕಿಸಿದರು.

ಎಲ್ಲ ರಂಗದಲ್ಲಿ ಬಿಜೆಪಿ ವಿಫಲವಾಗಿದೆ, ಮೋದಿಯನ್ನು ಮನೆಗೆ ಕಳುಹಿಸಿ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲಿದ್ದಾರೆ ಎನ್ನುವುದನ್ನು ಅರಿತ ಬಿಜೆಪಿ ನಾಯಕರು ಇದೀಗ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ರಾಮಮಂದಿರ ನಿರ್ಮಾಣದ ವಿಷಯ ಪ್ರಸ್ತಾಪ ಮಾಡಿದ್ದಾರೆ. ನಾಲ್ಕು ವರ್ಷ ಇಲ್ಲದ ರಾಮ ಮಂದಿರ ಈಗ ನೆನಪಾಗಿದೆ. ಚುನಾವಣೆ ವೇಳೆ ಇದನ್ನು ಬಳಸಿಕೊಳ್ಳಲು ಹೊರಟಿದ್ದಾರೆ. 1991ರಲ್ಲಿಯೂ ಹೀಗೆಯೇ ಮಾಡಿದ್ದರು. ಶ್ರೀರಾಮ ಸರ್ವೋತ್ತಮ, ಮರ್ಯಾದಾ ಪುರುಷ, ಅಂತಹ ರಾಮನ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಈ ವಿಷಯದಲ್ಲಿ ಬಿಜೆಪಿ ಮಾಡುವ ರಾಜಕಾರಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಲಿದೆ ಎಂದರು.

ಬಿಜೆಪಿ ವೈಫಲ್ಯವನ್ನು ಜನತೆ ಮುಂದೆ ಇಡುತ್ತೇವೆ. ಬಿಜೆಪಿ ವಿರುದ್ಧ ಅಲೆ ಎಬ್ಬಿಸಿ, ಕೋಮುವಾದಿ, ಜಾತಿವಾದಿ ಪಕ್ಷವನ್ನು ಧಿಕ್ಕರಿಸಿ ಪ್ರಗತಿಪರ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News