ದೋಸ್ತಿ ಪಕ್ಷಗಳ ಜಯಕ್ಕೆ ದಲಿತರು ಕಾರಣ: ಸಾಮಾಜಿಕ ನ್ಯಾಯ ಪರಿಷತ್ ಅಧ್ಯಕ್ಷ ಅನಂತರಾಯಪ್ಪ

Update: 2018-11-08 15:58 GMT

ಬೆಂಗಳೂರು, ನ. 8: ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಬಹುಮತದಿಂದ ಗೆಲುವು ಸಾಧಿಸಲು ದಲಿತ ಮತದಾರರು ನೀಡಿದ ನಿರ್ಣಾಯಕ ಮತಗಳೇ ಕಾರಣ ಎಂದು ಸಾಮಾಜಿಕ ನ್ಯಾಯ ಪರಿಷತ್ ಅಧ್ಯಕ್ಷ ಅನಂತರಾಯಪ್ಪ ತಿಳಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವನ್ನು ಬಲಪಡಿಸುವುದಕ್ಕಾಗಿ ಹಾಗೂ ಅಗತ್ಯ ಬಹುಮತದೊಡನೆ ಸಂವಿಧಾನ ಬದ್ಧವಾಗಿ ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲು ವಾಮಮಾರ್ಗದಲ್ಲಿ ಶಾಸಕರನ್ನು ಸೆಳೆಯುವಂತಹ ವಿಫಲ ಯತ್ನಕ್ಕೆ ಕೈಹಾಕಿದ ಬಿಜೆಪಿಗೆ ಪಾಠಕಲಿಸುವುದಕ್ಕಾಗಿ ದಲಿತ ಸಮುದಾಯದ ಮತದಾರರು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಜಯಕ್ಕೆ ಕಾರಣರಾಗಿದ್ದೇವೆಂದು ಹೇಳಿದರು.

ದುರ್ಬಲ ವರ್ಗಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕು ಹಾಗೂ ದಲಿತ ಸಮುದಾಯದ ಬೆಂಬಲವಿಲ್ಲದೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲಾರದು ಎಂಬ ಸತ್ಯ ಈಗಾಗಲೇ ಸಾಬೀತಾಗಿದ್ದು, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಇಂತಹ ಮೊಂಡು ಹೇಳಿಕೆಗಳನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.

ಎನ್.ಮಹೇಶ್‌ರಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಜೆಡಿಎಸ್‌ನಲ್ಲಿರುವ 6 ಮಂದಿ ಛಲವಾದಿ ಜನಾಂಗದ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಹೆಚ್ಚಿನ ಶಾಸಕರುಗಳು ಗೆದ್ದಿಲ್ಲ ಎಂಬ ನೆಪವನ್ನು ಒಡ್ಡದೆ ಮಾದಿಗ ಜನಾಂಗಕ್ಕೂ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಿ ಹಾಗೂ ಎಸ್ಟಿ ನಾಯಕ ಸಮುದಾಯಕ್ಕೂ ಒಂದು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News