ಆಸಿಯಾ ಬೀಬಿ ಬಿಚ್ಚಿಟ್ಟ ಪಾಕಿಸ್ತಾನದ ಬಜರಂಗಿ ಸಂಸ್ಕಾರ

Update: 2018-11-09 03:56 GMT

ಪಾಕಿಸ್ತಾನ ಸರಕಾರದ ಮತ್ತು ಅಲ್ಲಿಯ ಸಮಾಜದ ಬಗ್ಗೆ ಜಾಗತಿಕ ಜನಾಭಿಪ್ರಾಯವು ಮೊದಲೇ ಸಾಕಷ್ಟು ಪ್ರತಿಕೂಲವಾಗಿದೆ, ಪಾಕಿಸ್ತಾನದ ಹೆಸರೆತ್ತಿದೊಡನೆ ಜನರಿಗೆ ಮಿಲಿಟರಿ ಸರ್ವಾಧಿಕಾರ, ಭಯೋತ್ಪಾದನೆ, ತಾಲಿಬಾನ್, ಮಸೀದಿ, ಶಾಲೆ, ಮಾರುಕಟ್ಟೆಗಳಲ್ಲಿ ನಡೆಯುವ ಬಾಂಬ್ ಸ್ಫೋಟಗಳು,ಪತ್ರಕರ್ತರು, ಬುದ್ಧಿಜೀವಿಗಳ ಹತ್ಯೆ, ಮಾದಕ ದ್ರವ್ಯ ಮಾರುವ ವ್ಯವಸ್ಥಿತ ಜಾಲಗಳು ಇವೇ ಮುಂತಾದ ಅನಿಷ್ಟಗಳ ಸರಣಿಯೇ ನೆನಪಾಗಿ ಬಿಡುತ್ತದೆ. ಇದೀಗ ಆಸಿಯಾ ಬೀಬಿ ಎಂಬ ನಾಲ್ಕು ಮಕ್ಕಳ ತಾಯಿಯ ಪ್ರಕರಣವು ಮತ್ತೆ ಪಾಕಿಸ್ತಾನದ ಮಾನವನ್ನು ಜಗತ್ತಿನ ಮುಂದೆ ಹರಾಜಿಗಿಟ್ಟಿದೆ.

  2008 ರಲ್ಲಿ ಆಸಿಯಾ ಬೀಬಿ ಎಂಬ ಓರ್ವ ಕ್ರೈಸ್ತ ಮಹಿಳೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆ ಹಾಗೂ ಆಕೆಯ ಸಹ ಕಾರ್ಮಿಕರ ನಡುವೆ ಜಗಳವಾಗಿದ್ದು, ಆಕೆ ತನ್ನ ಕೋಪದ ಭರದಲ್ಲಿ ಆಡಿದ ಮಾತುಗಳಲ್ಲಿ ಧರ್ಮ ನಿಂದನೆಯ ಅಂಶ ಗಳಿದ್ದವು ಎಂಬ ಆಧಾರದಲ್ಲಿ ಆಕೆಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯವು ಆಕೆಯನ್ನು ಅಪರಾಧಿ ಎಂದು ಘೋಷಿಸಿ ಪಾಕಿಸ್ತಾನದ ವಿವಾದಾಸ್ಪದ ಧರ್ಮ ನಿಂದನೆ ಕಾನೂನಿನ ಪ್ರಕಾರ ಆಕೆಗೆ ಮರಣದಂಡನೆ ವಿಧಿಸಿತು. ಮುಂದೆ ಲಾಹೋರ್ ಹೈಕೋರ್ಟು ಈ ಶಿಕ್ಷೆಯನ್ನು ಎತ್ತಿ ಹಿಡಿಯಿತು. ಆದರೆ ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಪಾಕ್ ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಪ್ರಕಟಿಸಿದ ತೀರ್ಪಿನಲ್ಲಿ ಪ್ರಸ್ತುತ ಮರಣದಂಡನೆಯನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೆ ಆಕೆ ನಿರ್ದೋಷಿ ಎಂದು ಘೋಷಿಸಿ ಆಕೆಯನ್ನು ಬಿಡುಗಡೆಗೊಳಿಸಿಬಿಟ್ಟಿತು.

ಈ ಮೂಲಕ ಪಾಕಿಸ್ತಾನದಲ್ಲಿ ನ್ಯಾಯಾಂಗ ವ್ಯವಸ್ಥೆಯು ಸಾಕಷ್ಟು ಜೀವಂತವಾಗಿದೆ ಎಂದು ಆ ದೇಶದ ಒಳಗೂ ಹೊರಗೂ ಹಲವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಆದರೆ ತೀರ್ಪಿನ ನಂತರದ ಬೆಳವಣಿಗೆಗಳು ಪಾಕಿಸ್ತಾನದೊಳಗಿನ ಹಲವು ವ್ಯಾಧಿಗಳನ್ನು ಚರ್ಚಾ ವಿಷಯಗಳಾಗಿಸಿ ಜಗತ್ತಿನ ಗಮನಕ್ಕೆ ತಂದಿವೆ. ತಮ್ಮದು ಶುದ್ಧ ಪ್ರಜಾಸತ್ತಾತ್ಮಕ ದೇಶವೆಂದು ಲೋಕವನ್ನು ನಂಬಿಸಲು ಹೊರಟಿರುವ ಇಮ್ರಾನ್ ಖಾನ್ ಅವರ ನವೋತ್ಸಾಹಿ ಸರಕಾರಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಿದೆ. ಜೊತೆಗೇ, ಅಲ್ಲಿನ ನಾಗರಿಕ ಸಮಾಜ ಕೂಡಾ ಸಂಪೂರ್ಣ ಜಗತ್ತಿನ ಮುಂದೆ ಮುಜುಗರಕ್ಕೆ ಸಿಲುಕಿದೆ.

ಆಸಿಯಾ ಬೀಬಿಯನ್ನು ಖುಲಾಸೆ ಗೊಳಿಸುವ ತೀರ್ಪು ಪ್ರಕಟವಾದ ಬೆನ್ನಿಗೆ ಪಾಕಿಸ್ತಾನದ ಕೆಲವು ಅರಾಜಕತಾವಾದಿ ಮತಾಂಧ ಗುಂಪುಗಳು ಪ್ರಸ್ತುತ ತೀರ್ಪನ್ನು ವಿರೋಧಿಸಿ ರಸ್ತೆಗಿಳಿದು ಹಿಂಸಾತ್ಮಕ ಪ್ರತಿಭಟನೆ ಆರಂಭಿಸಿದವು. ಕೆಲವು ಮತಾಂಧ ವಿದ್ವಾಂಸರು, ಪ್ರಸ್ತುತ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಿಗೆ ಮರಣದಂಡನೆ ವಿಧಿಸಬೇಕೆಂದು ತಾವೇ ತೀರ್ಪು ಹೊರಡಿಸಿದರು. ಇದೀಗ ಆಸಿಯಾರ ರಕ್ಷಣೆಗಾಗಿ ಸರಕಾರವು ಆಕೆಯನ್ನು ಭಾರೀ ಭದ್ರತೆಯ ಅಜ್ಞಾತ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟಿದೆ. ಆಕೆಯ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದ ವಕೀಲರು ಜೀವ ಭಯದಿಂದ ದೇಶಬಿಟ್ಟು ನೆದರ್ ಲ್ಯಾಂಡ್‌ಗೆ ಪಲಾಯನ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ, ಬೇರೊಂದು ಪ್ರಕರಣದಲ್ಲಿ, ಪ್ರತಿಕೂಲ ತೀರ್ಪೊಂದಕ್ಕೆ ಪ್ರತೀಕಾರವಾಗಿ ಲಾಹೋರ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ರೊಬ್ಬರನ್ನು ರಸ್ತೆಯಲ್ಲಿ ಗುಂಡಿಟ್ಟು ಕೊಲ್ಲಲಾಯಿತು.

ಇಮ್ರಾನ್ ಖಾನ್ ತನ್ನ ಜಾಣ ನಡೆಗಳ ಮೂಲಕ ಸದ್ಯದ ತನ್ನ ಪರಾವಲಂಬಿ ದುಸ್ಥಿತಿಯಿಂದ ಹೊರಬಂದು ಎಲ್ಲಿ ಪ್ರಬಲರಾಗಿ ಬೆಳೆದು ಬಿಡುತ್ತಾರೋ ಎಂದು ಅಂಜುತ್ತಿರುವ ಅಲ್ಲಿನ ಹಳೆಯ ಪಕ್ಷಗಳು ಮತ್ತು ಅವುಗಳ ನಾಯಕರು ಸದ್ಯದ ಸನ್ನಿವೇಶವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಪಶ್ಚಿಮದ ಕೆಲವು ಮತಾಂಧ ಮಿಶನರಿ ಸಂಸ್ಥೆಗಳು ಆಸಿಯಾ ಪ್ರಕರಣವನ್ನು ಮುಸ್ಲಿಮ್ ಸಮಾಜ ಮತ್ತು ಕ್ರೈಸ್ತ ಸಮಾಜಗಳ ನಡುವಣ ಸಂಘರ್ಷ ಎಂದು ಬಿಂಬಿಸುವ ಪ್ರಯತ್ನವನ್ನೂ ನಡೆಸಿವೆ. ನಿಜವಾಗಿ ’ಧರ್ಮ ನಿಂದನೆ’ ಎಂಬುದು ಪಾಕಿಸ್ತಾನದಲ್ಲಿ ಅರಾಜಕತಾವಾದಿಗಳ ಹಳೆಯ ಅಸ್ತ್ರವಾಗಿದೆ. ಅದು ಅಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಣ ಸಮಸ್ಯೆಯೇ ಅಲ್ಲ. ಏಕೆಂದರೆ ಯಾರಾದರೂ ಇಸ್ಲಾಮ್ ಧರ್ಮ ಮಾತ್ರವಲ್ಲ ಪಾಕಿಸ್ತಾನದಲ್ಲಿ ಅಧಿಕೃತ ಮಾನ್ಯತೆ ಇರುವ ಹಿಂದೂ, ಕ್ರೈಸ್ತ, ಬೌದ್ಧ ಮತ್ತಿತರ ಯಾವುದೇ ಧರ್ಮದ ವಿಷಯದಲ್ಲಿ ಧರ್ಮ ನಿಂದನೆ ನಡೆಸಿದರೂ ಧರ್ಮ ನಿಂದನೆಯ ಕಾನೂನು ಅವರಿಗೆ ಅನ್ವಯಿಸುತ್ತದೆ.

2014 ರ ವರೆಗಿನ ಅಂಕಿ ಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ ಈ ತನಕ ಧರ್ಮ ನಿಂದನೆಯ 1,300ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಬಂದಿವೆ. ಬಹುತೇಕ ಈ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳು ಮುಸ್ಲಿಮರು. ಮುಸ್ಲಿಮರೊಳಗಿನ ಒಳಗುಂಪುಗಳು ಪರಸ್ಪರ ಹಗೆ ಸಾಧನೆಗಾಗಿ ಧರ್ಮನಿಂದನೆಯ ಕಾನೂನನ್ನು ಧಾರಾಳವಾಗಿ ಬಳಸಿಕೊಂಡಿವೆ. ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕಾನೂನು ಕಾಲಕ್ರಮೇಣ ತುಂಬಾ ಕಠಿಣ ಸ್ವರೂಪ ತಾಳಿದ್ದರೂ ನ್ಯಾಯಾಲಯಗಳು ಈ ವಿಷಯದಲ್ಲಿ ಉದಾರ ಧೋರಣೆ ಅನುಸರಿಸಿವೆ. ಆದ್ದರಿಂದಲೇ ಹೆಚ್ಚಿನ ಪ್ರಕರಣಗಳಲ್ಲಿ ಆರೋಪ ಸಾಬೀತಾಗದೆ ಆರೋಪಿಯ ಖುಲಾಸೆಯಾಗುತ್ತದೆ. ಉಳಿದಂತೆ ದಂಡ ಪಾವತಿ ಅಥವಾ ಕೆಲವು ತಿಂಗಳ ಸಜೆಯೊಂದಿಗೆ ಪ್ರಕರಣ ಮುಗಿಯುತ್ತದೆ. ಅಧಿಕೃತವಾಗಿ ನ್ಯಾಯಾಲಯದ ಮೂಲಕ ಮರಣದಂಡನೆಯಲ್ಲಿ ಕೊನೆಗೊಳ್ಳುವ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ.

ಭಾರತದಂತೆ ಪಾಕಿಸ್ತಾನದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿಜವಾದ ಬೆದರಿಕೆ ಇರುವುದು ಅಲ್ಲಿಯ ಮತಾಂಧ ಬೀದಿ ಪುಂಡರಿಂದಲೇ ಹೊರತು ಸರಕಾರ ಅಥವಾ ನ್ಯಾಯಾಂಗದಿಂದಲ್ಲ ಎಂಬುದು ಗಮನಾರ್ಹ. ಇದಕ್ಕಿರುವ ಪುರಾವೆ ಏನೆಂದರೆ ಅಲ್ಲಿ ಕಳೆದ 18 ವರ್ಷಗಳಲ್ಲಿ ಧರ್ಮನಿಂದನೆಯ ಆರೋಪ ಹೊತ್ತು ವಿಚಾರಣೆ ಎದುರಿಸುತ್ತಿದ್ದವರ ಪೈಕಿ 60ಕ್ಕೂ ಹೆಚ್ಚು ಮಂದಿಯನ್ನು ಮತಾಂಧ ಪುಂಡ ಗುಂಪುಗಳೇ ಕೊಂದುಹಾಕಿವೆ. ಅಲ್ಲಿಯ ಧರ್ಮ ರಕ್ಷಕ ಗ್ಯಾಂಗುಗಳು ತಮ್ಮ ಪುಂಡರನ್ನು ಧರ್ಮದ ಹೆಸರಲ್ಲಿ ಪ್ರಚೋದಿಸಿ ಇಂತಹ ಕುಕೃತ್ಯಗಳನ್ನು ಮಾಡಿಸುತ್ತವೆ.

ಪಾಕಿಸ್ತಾನದಲ್ಲಿ ಯಾವುದೇ ಉಗ್ರವಾದಿ ಮತಾಂಧ ಗುಂಪಿಗೆ ಸಾರ್ವಜನಿಕ ಮನ್ನಣೆ ಇಲ್ಲ. ಯಾವುದೇ ಉಗ್ರವಾದಿ ಧಾರ್ಮಿಕ ಗುಂಪಿಗೆ ಅಥವಾ ನಾಯಕರಿಗೆ, ನೇರವಾಗಿ ಜನರ ಮುಂದೆ ಹೋಗಿ ಮತ ಯಾಚಿಸಿ ಪ್ರಜಾಸತ್ತಾತ್ಮಕ ವಿಧಾನದಿಂದ ಅಧಿಕಾರಕ್ಕೆ ಬರುವ ಸಾಮರ್ಥ್ಯವಿಲ್ಲ. ಈ ಗುಂಪುಗಳು ಜನತೆಯ ದೈನಂದಿನ ನೈಜ ಸಮಸ್ಯೆಗಳ ಪೈಕಿ ಯಾವುದೇ ಸಮಸ್ಯೆಯನ್ನು ಬಗೆ ಹರಿಸುವುದಂತಿರಲಿ, ಅವುಗಳ ಪರಿಹಾರಕ್ಕಾಗಿ ಹೋರಾಡಿದ ದಾಖಲೆ ಕೂಡಾ ಇಲ್ಲ. ಆದರೂ ಅವರಿಗೆ ಅಧಿಕಾರ ಬೇಕು, ಅಧಿಕಾರದ ಜೊತೆಗೆ ಬರುವ ಸಂಪತ್ತು, ಸವಲತ್ತುಗಳೆಲ್ಲ ಬೇಕು. ಅದಕ್ಕಾಗಿ ಅವು ಜನರ ಧಾರ್ಮಿಕ ಭಾವನೆಗಳನ್ನು ಶೋಷಿಸಿ ಆ ಮೂಲಕ ತಮ್ಮ ಬೇಳೆ ಬೇಯಿಸುವುದಕ್ಕೆ ಅವಕಾಶಕ್ಕಾಗಿ ಹೊಂಚು ಹಾಕುತ್ತಿರುತ್ತವೆ. ಒಂದುವೇಳೆ ಈ ಉಗ್ರವಾದಿ ವಿದ್ವಾಂಸರು, ಧಾರ್ಮಿಕ ಸಂಘಟನೆಗಳು ಮತ್ತು ಸಂಸ್ಥೆಗಳಿಗೆ ನಿಜವಾಗಿ ಇಸ್ಲಾಮ್ ಧರ್ಮದ ಮೇಲೆ, ಪ್ರವಾದಿ ಮುಹಮ್ಮದ್ (ಸ) ಅವರ ಮೇಲೆ, ಕುರ್ ಆನ್ ಗ್ರಂಥದ ಮೇಲೆ ಪ್ರಾಮಾಣಿಕವಾದ ಪ್ರೀತಿ ಅಭಿಮಾನಗಳೆಲ್ಲಾ ಇದ್ದಿದ್ದರೆ ಅವರು ತಮ್ಮ ಪಾಕ್ ಸಮಾಜವನ್ನು ಶೋಷಣೆ, ಅನ್ಯಾಯಗಳಿಂದ, ಭ್ರಷ್ಟತೆ, ಅನೀತಿಗಳಿಂದ ಮತ್ತು ಅಜ್ಞಾನ, ಮೌಢ್ಯಗಳಿಂದ ಮುಕ್ತಗೊಳಿಸಲು ಹೋರಾಡಬೇಕಿತ್ತು.

ಇಂದು ಪಾಕಿಸ್ತಾನ ತನ್ನೆಲ್ಲ ಸಂಪನ್ಮೂಲಗಳ ಹೊರತಾಗಿಯೂ ಜಗತ್ತಿನ ತೀರಾ ಬಡ ಹಾಗೂ ಹಿಂದುಳಿದ ದೇಶಗಳ ಸಾಲಿನಲ್ಲಿದೆ. ಅಲ್ಲಿನ ಜನಸಂಖ್ಯೆ ಭಾರತಕ್ಕಿಂತ ತುಂಬಾ ಕಡಿಮೆಯಿದ್ದರೂ, ಆ ದೇಶವು ಸಾಮಾಜಿಕ ಹಾಗೂ ಆರ್ಥಿಕ ಸಾಧನೆಗಳ ದೃಷ್ಟಿಯಿಂದ ಭಾರತಕ್ಕಿಂತ ತುಂಬಾ ಹಿಂದಿದೆ. ಅಲ್ಲಿಯ ಶೇ.40 ಜನರು ಕಡು ಬಡತನದಲ್ಲಿ ನರಳುತ್ತಿದ್ದಾರೆ. ಅಲ್ಲಿ ಅರ್ಧ ಕೋಟಿಯಷ್ಟು ಬಾಲ ಕಾರ್ಮಿಕರಿದ್ದಾರೆ. ಜಗತ್ತಿನ ಬೇರೆಲ್ಲ ಹಿಂದುಳಿದ ರಾಷ್ಟ್ರಗಳು ಸಾಕ್ಷರತೆಯ ರಂಗದಲ್ಲಿ ಕ್ಷಿಪ್ರವಾಗಿ ಮುನ್ನಡೆಯುತ್ತಿರುವಾಗ ಪಾಕಿಸ್ತಾನದಲ್ಲಿ ಸಾಕ್ಷರತೆಯ ಪ್ರಮಾಣವು ಶೇ.60 ರಿಂದ ಶೇ. 58ಕ್ಕೆ ಕುಸಿದಿದೆ. ಅಂದರೆ ಅಲ್ಲಿ ನಿರಕ್ಷರಿಗಳ ಸಂಖ್ಯೆ ಹೆಚ್ಚುತ್ತಿದೆ ! ಕಳೆದ ವರ್ಷ ಅಲ್ಲಿ ನಿರುದ್ಯೋಗಿಗಳ ಪ್ರಮಾಣ ಬಹುತೇಕ ಶೇ.8ರಷ್ಟಿತ್ತು. ಇಂತಹ ದಾರುಣ ಸ್ಥಿತಿಯಲ್ಲಿರುವ ದೇಶದಲ್ಲಿ ಕೆಲವರನ್ನು ಧರ್ಮ ನಿಂದಕರೆಂದು ಘೋಷಿಸಿ ಅವರ ರುಂಡಕ್ಕೆ ಲಕ್ಷಾಂತರ ರೂಪಾಯಿ ಬೆಲೆಕಟ್ಟುವ ಮತ್ತು ಯುವ ಜನತೆಯನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಹಿಂಸೆಗಿಳಿಸುವ ನಾಯಕರು, ವಿದ್ವಾಂಸರು ಮತ್ತು ಸಂಘಟನೆಗಳು ಆ ದೇಶ ಮತ್ತು ಅಲ್ಲಿಯ ಧರ್ಮದ ನಿಜವಾದ ಶತ್ರುಗಳೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಂತಹ ರಕ್ಷಕರನ್ನು ಅವಲಂಬಿಸುವ ಸಮಾಜವನ್ನು ನಾಶ ಮಾಡುವುದಕ್ಕೆ ಬೇರೆ ಶತ್ರುಗಳ ಅಗತ್ಯವೇ ಇಲ್ಲ.

ಪಾಕಿಸ್ತಾನದ ವರ್ತಮಾನ ಪರಿಸ್ಥಿತಿಯಲ್ಲಿ ನಮ್ಮ ಭಾರತೀಯ ಸಮಾಜಕ್ಕೆ ಹಲವು ಮಹತ್ವದ ಪಾಠಗಳಿವೆ. ಜನಸಾಮಾನ್ಯರು ಪ್ರಾಮಾಣಿಕವಾಗಿ ಧರ್ಮವನ್ನು ನಂಬಿರುವ ಮತ್ತು ಭಾವನಾತ್ಮಕವಾಗಿ ಧರ್ಮಕ್ಕೆ ಅಂಟಿಕೊಂಡಿರುವಂತಹ ಸಮಾಜಗಳಲ್ಲಿ ಧರ್ಮದ ಚುಕ್ಕಾಣಿಯು ದುಷ್ಟರ, ಭ್ರಷ್ಟರ ಹಾಗೂ ಮತಾಂಧರ ಕೈಗಳಿಗೆ ಸಿಲುಕಿ ಬಿಟ್ಟರೆ ಎಂತೆಂತಹ ಅನಾಹುತಗಳು ಸಂಭವಿಸಬಹುದು ಎಂಬುದನ್ನು ವಿವಿಧ ಪ್ರಮಾಣದ ಹಿಂಸೆ, ದೊಂಬಿ, ಗಲಭೆ, ಸಾಮೂಹಿಕ ಹಲ್ಲೆ, ಗುಂಪು ಹತ್ಯೆ ಇತ್ಯಾದಿಗಳ ರೂಪದಲ್ಲಿ ನಾವು ನಮ್ಮ ಅಕ್ಕ ಪಕ್ಕದಲ್ಲೇ ಆಗಾಗ ನೋಡುತ್ತಿರುತ್ತೇವೆ. ಧರ್ಮದ ವಿಷಯದಲ್ಲಿ ನಾವು ನ್ಯಾಯಾಲಯದ ತೀರ್ಪನ್ನು ಅಂಗೀಕರಿಸುವುದಿಲ್ಲ ಎಂದು ಅತ್ತ ಆಸಿಯಾ ಪ್ರಕರಣದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕೆಲವು ಮತಾಂಧ ಧರ್ಮಗುರುಗಳು ಘೋಷಿಸಿದ್ದರೆ, ಇತ್ತ ನಮ್ಮಲ್ಲೂ ಅದೇ ರೀತಿಯ ಹೇಳಿಕೆಗಳನ್ನು ನಮ್ಮ ಕೆಲವು ಪುರೋಹಿತ ಶಿರೋಮಣಿಗಳು ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ನೀಡಿದ್ದಾರೆ. ಭೌಗೋಳಿಕವಾಗಿ ಪಾಕಿಸ್ತಾನ ನಮ್ಮ ಪಕ್ಕದಲ್ಲೇ ಇದೆ ಎಂಬುದು ಎಷ್ಟು ಸತ್ಯವೋ, ಅಲ್ಲಿ ಮೆರೆಯುತ್ತಿರುವ ಅರಾಜಕತೆಯ, ಭಾವನಾತ್ಮಕ ಶೋಷಣೆಯ ಮತ್ತು ಧರ್ಮವನ್ನು ಹಿಂಸೆಗಾಗಿ ಬಳಸುವ ಮನಸ್ಥಿತಿ ನಮ್ಮ ನೆಲದಲ್ಲಿ ನಮ್ಮನ್ನು ಸುತ್ತುವರಿದಿವೆ ಎಂಬುದೂ ಅಷ್ಟೇ ಸತ್ಯವಾಗಿದೆ. ಆದ್ದರಿಂದ ನೆರೆಯವರಿಗೆ ಉಪದೇಶಿಸುವ ಭರದಲ್ಲಿ ಸ್ವತಃ ನಮ್ಮ ಮನೆಯಂಗಳವನ್ನು ಮರೆಯದೆ, ಎರಡೂ ನೆಲಗಳು ಮತಾಂಧರ ಕಪಿ ಮುಷ್ಟಿಗೆ ಸಿಲುಕದೆ ಔದಾರ್ಯದ ನೆಲಗಳಾಗಿ ಉಳಿಯಲಿ ಎಂದು ಹಾರೈಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News