ಕ್ಯಾನ್ಸರ್ ಗೆದ್ದು ಶೀಘ್ರ ಆಟದ ಕಣಕ್ಕೆ ಮರಳುವ ವಿಶ್ವಾಸದಲ್ಲಿ ಲೀಚಾಂಗ್

Update: 2018-11-08 18:36 GMT

ಕೌಲಾಲಂಪುರ, ನ.8: ಮೂಗಿನ ಕ್ಯಾನ್ಸರ್ ಬಾಧಿತರಾಗಿರುವ ವಿಶ್ವದ ಮಾಜಿ ನಂ.1 ಬ್ಯಾಡ್ಮಿಂಟನ್ ಆಟಗಾರ ಮಲೇಶ್ಯಾದ ಲೀ ಚಾಂಗ್ ವೀ, ತಾನು ಶೀಘ್ರ ಗುಣಮುಖನಾಗಿ ಮಾರ್ಚ್‌ನಲ್ಲಿ ನಡೆಯಲಿರುವ ಆಲ್-ಇಂಗ್ಲೆಂಡ್ ಟೂರ್ನಿಯಲ್ಲಿ ಆಟದ ಕಣಕ್ಕೆ ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲಾ ಚಿಕಿತ್ಸೆಗಳೂ ಪೂರ್ಣಗೊಂಡಿವೆ. ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದು 36ರ ಹರೆಯದ ಚಾಂಗ್ ಕೌಲಲಾಂಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹರ್ಷಚಿತ್ತರಾಗಿ ತಿಳಿಸಿದರು. ಇದುವರೆಗೆ ತಾನು ನಿವೃತ್ತಿ ಘೋಷಿಸಿಲ್ಲ. ಆಟದ ಅಂಕಣಕ್ಕೆ ಶೀಘ್ರ ಮರಳುವ ವಿಶ್ವಾಸವಿದೆ ಎಂದು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಬೆಳ್ಳಿ ಪದಕ ಗೆದ್ದಿರುವ ಚಾಂಗ್ ತಿಳಿಸಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಬೇಕೆಂಬುದು ತನ್ನ ಕನಸಾಗಿದೆ. ಆದರೆ ಎಲ್ಲದಕ್ಕೂ ಆರೋಗ್ಯ ಮುಖ್ಯವಾಗಿದೆ. ಆದರೆ ನಾನು ದೇಶವನ್ನು ಪ್ರೀತಿಸುತ್ತೇನೆ ಮತ್ತು ದೇಶಕ್ಕಾಗಿ ಆಡುವುದನ್ನು, ಪದಕ ಗೆಲ್ಲುವುದನ್ನು ಬಯಸುತ್ತೇನೆ. ಈ ಕಾರಣದಿಂದ ತೀವ್ರ ಪ್ರಯತ್ನ ಪಡುತ್ತೇನೆ ಎಂದರು. ಮೂಗಿನ ಕ್ಯಾನ್ಸರ್ ರೋಗ ಆರಂಭದ ಹಂತದಲ್ಲಿದ್ದಾಗಲೇ ಪತ್ತೆಯಾಗಿದ್ದು ವೈದ್ಯರ ಸಲಹೆ ಮೇರೆಗೆ ತೈವಾನ್‌ಗೆ ತೆರಳಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಚಾಂಗ್ ತಿಳಿಸಿದ್ದಾರೆ. ಇದೀಗ ಚಾಂಗ್ ವಿಶ್ವದಲ್ಲಿ 8ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ. 2014ರಲ್ಲಿ ನಡೆದಿದ್ದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಉದ್ದೀಪನಾ ದ್ರವ್ಯ ಸೇವಿಸಿದ ಪ್ರಕರಣದಲ್ಲಿ ಒಂದು ವರ್ಷದ ನಿಷೇಧಕ್ಕೆ ಒಳಗಾಗಿದ್ದ ಚಾಂಗ್, 2015ರಲ್ಲಿ ಆಟದ ಅಂಗಣಕ್ಕೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News