​ತಾಲಿಬಾನ್ ಜತೆ ವೇದಿಕೆ ಹಂಚಿಕೊಳ್ಳಲಿದೆ ಭಾರತ!

Update: 2018-11-09 03:56 GMT
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ರವೀಶ್ ಕುಮಾರ್

ಹೊಸದಿಲ್ಲಿ, ನ.9: ಇತಿಹಾಸದಲ್ಲೇ ಮೊದಲ ಬಾರಿಗೆ ತಾಲಿಬಾನ್ ಮುಖಂಡರ ಜತೆ ಶುಕ್ರವಾರ ಮಾಸ್ಕೊದಲ್ಲಿ ನಡೆಯುವ ಅಪ್ಘಾನಿಸ್ತಾನ ಕುರಿತ ಸಭೆಯಲ್ಲಿ ಭಾರತ ವೇದಿಕೆ ಹಂಚಿಕೊಳ್ಳಲಿದ್ದು, ಭಾರತದ ಈ ನಡೆ ಹಲವರ ಹುಬ್ಬೇರಿಸುವಂತೆ ಮಾಡಿದೆ.

ರಶ್ಯ ಆಯೋಜಿಸಿರುವ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅನಧಿಕೃತವಾಗಿ ಎಂದು ಭಾರತ ಹೇಳಿಕೊಂಡಿದೆ. ಅಪ್ಘಾನಿಸ್ತಾನದಲ್ಲಿ ಶಾಂತಿ ಪುನಃಸ್ಥಾಪನೆಯ ಎಲ್ಲ ಪ್ರಯತ್ನಗಳ ನೇತೃತ್ವವನ್ನು ಅಫ್ಘನ್ನರೇ ವಹಿಸಬೇಕು. ಜತೆಗೆ ಅವರ ಯಜಮಾನಿಕೆ ಹಾಗೂ ನಿಯಂತ್ರಣದಲ್ಲೆ ಇಂಥ ಪ್ರಯತ್ನಗಳು ಇರಬೇಕು ಎಂಬ ತನ್ನ ನಿಲುವನ್ನು ಭಾರತ ಪುನರುಚ್ಚರಿಸಿದೆ. ಸಭೆಯಲ್ಲಿ ನಿವೃತ್ತ ರಾಜತಾಂತ್ರಿಕರಾದ ಟಿಸಿಎ ರಾಘವನ್ ಮತ್ತು ಅಮರ್ ಸಿನ್ಹಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಭಾರತ ಚೆನ್ನಾಗಿ ಯೋಚಿಸಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಇದು ಅಪ್ಘಾನ್ ಸರ್ಕಾರದ "ಸಮಾಧಾನದ ಹಂತ"ಕ್ಕೆ ಅನುಗುಣವಾಗಿಯೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ರಷ್ಯಾ ನವೆಂಬರ್ 9ರಂದು ಅಪ್ಘಾನ್ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಿರುವ ಬಗ್ಗೆ ನಮಗೆ ಮಾಹಿತಿ ಇದೆ" ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

"ಅಪ್ಘಾನಿಸ್ತಾನದಲ್ಲಿ ಏಕತೆ ಮತ್ತು ಬಹುತ್ವವನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ದೇಶದ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯ ದೃಷ್ಟಿಯಿಂದ ನಡೆಸುವ ಎಲ್ಲ ಶಾಂತಿ ಮತ್ತು ಸಾಮರಸ್ಯ ಪ್ರಯತ್ನಗಳನ್ನು ಭಾರತ ಬೆಂಬಲಿಸಲಿದೆ. ಆದರೆ ಈ ಎಲ್ಲ ಪ್ರಯತ್ನಗಳ ನೇತೃತ್ವ ಅಪ್ಘನ್ನರದೇ ಆಗಿರಬೇಕು; ಅವರ ಯಜಮಾನಿಕೆ ಮತ್ತು ನಿಯಂತ್ರಣದಲ್ಲೇ ನಡೆಯಬೇಕು ಎನ್ನುವುದು ಭಾರತದ ಸ್ಪಷ್ಟ ನಿಲುವು" ಎಂದು ಹೇಳಿದ್ದಾರೆ.

ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಖಾತೆಯ ಮಾಜಿ ಕಾರ್ಯದರ್ಶಿ ಅಮರ್ ಸಿನ್ಹಾ ಅಪ್ಘಾನಿಸ್ತಾನದಲ್ಲಿ ಹಿಂದೆ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಟಿಸಿಎ ರಾಘವನ್ ಅವರು ಪಾಕಿಸ್ತಾನದಲ್ಲಿ ಭಾರತದ ಹೈಕಮಿಷನರ್ ಆಗಿದ್ದರು.

ಅಪ್ಘಾನಿಸ್ತಾನ, ಭಾರತ, ಇರಾನ್, ಕಝಕಿಸ್ತಾನ, ಕಿರ್ಗಿಸ್ತಾನ, ಚೀನಾ, ಪಾಕಿಸ್ತಾನ, ತಝಿಕಿಸ್ತಾನ, ತುರ್ಕಮೇನಿಸ್ತಾನ, ಉಜ್ಬೆಕಿಸ್ತಾನ, ಅಮೆರಿಕ ಹಾಗೂ ಅಪ್ಘನ್ ತಾಲಿಬಾನ್ ಪ್ರತಿನಿಧಿಗಳನ್ನು ಸಭೆಗ ಆಹ್ವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News