ನೋಟ್ ಬ್ಯಾನ್ ಕಪ್ಪು ಹಣ, ಖೋಟಾ ನೋಟು ನಿಯಂತ್ರಿಸಬಹುದೆಂಬ ಸರಕಾರದ ವಾದ ತಿರಸ್ಕರಿಸಿದ್ದ ಆರ್ ಬಿಐ

Update: 2018-11-09 08:34 GMT

ಹೊಸದಿಲ್ಲಿ, ನ.9: ನವೆಂಬರ್ 8, 2016ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯದ ನಿರ್ಧಾರ ಘೋಷಿಸುವ  ಕೆಲವೇ ಗಂಟೆಗಳ ಮುನ್ನ ಈ ನಿರ್ಧಾರಕ್ಕೆ ತನ್ನ ಅನುಮತಿ ನೀಡುವ ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂತಹ ಒಂದು ಕ್ರಮ ಕೈಗೊಳ್ಳಲು ಸರಕಾರ ನೀಡಿದ್ದ ಎರಡು ಸಮರ್ಥನೆಗಳಾದ - ಕಾಳಧನ ಹಾಗೂ ನಕಲಿ ನೋಟು ಹಾವಳಿ ನಿಯಂತ್ರಣ- ಇವುಗಳನ್ನು ತಿರಸ್ಕರಿಸಿತ್ತು ಎಂದು ಆಂಗ್ಲ ದೈನಿಕ ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ತಿಳಿಸಿದೆ. ನೋಟು ಅಮಾನ್ಯೀಕರಣ ಕ್ರಮ ಕೈಗೊಂಡು ಎರಡು ವರ್ಷ ಪೂರೈಸಿದ ಸಂದರ್ಭ ಈ ಸುದ್ದಿ ಹೊರಬಿದ್ದಿದೆ.

ರಿಸರ್ವ್ ಬ್ಯಾಂಕಿನ 561ನೇ  ಸೆಂಟ್ರಲ್ ಬೋರ್ಡ್ ಸಭೆಯನ್ನು ನವೆಂಬರ್ 8, 2016ರಂದು ಸಂಜೆ 5.30ಕ್ಕೆ ಹೊಸದಿಲ್ಲಿಯಲ್ಲಿ ಕರೆಯಲಾಗಿತ್ತು. ಆರ್‍ ಬಿಐನ ನಿರ್ದೇಶಕರು ಅಮಾನ್ಯೀಕರಣ ‘ಪ್ರಶಂಸಾರ್ಹ’ ಎಂದು ಹೇಳಿದರೂ  ಅದು  ಪ್ರಸ್ತುತ ವರ್ಷದ ಜಿಡಿಪಿ ಮೇಲೆ ಅಲ್ಪಾವಧಿಯ ಮಟ್ಟಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು ಎಂದು ಎಚ್ಚರಿಸಿದ್ದರು. ಆರು ಆಕ್ಷೇಪಣೆಗಳು ಕೇಳಿ ಬಂದ ಈ ಸಭೆಯ ನಡಾವಳಿಗೆ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಡಿಸೆಂಬರ್ 15, 2016ರಂದು ಸಹಿ ಹಾಕಿದ್ದರು.

ನೋಟು ಅಮಾನ್ಯೀಕರಣ ಯೋಜನೆಯ ಕರಡು ಪ್ರಸ್ತಾವನೆ ವಿತ್ತ ಸಚಿವಾಲಯದಿಂದ ರಿಸರ್ವ್ ಬ್ಯಾಂಕ್ ನಿರ್ದೇಶಕರನ್ನು ನವೆಂಬರ್ 7ರಂದು ತಲುಪಿತ್ತು. ಕಾಳಧನ ನಿಯಂತ್ರಣ ಈ ಕ್ರಮದಿಂದ ಸಾಧ್ಯ ಎಂದು ವಿತ್ತ ಸಚಿವಾಲಯ ಈ ಪ್ರಸ್ತಾವನೆಯಲ್ಲಿ ಹೇಳಿದ್ದರೆ, ಕಾಳ ಧನ ಹೆಚ್ಚಾಗಿ ರಿಯಲ್ ಎಸ್ಟೇಟ್ ಹಾಗೂ ಚಿನ್ನದ ರೂಪದಲ್ಲಿರುವುದರಿಂದ ಈ ಕ್ರಮ ಅವುಗಳ ಮೇಲೆ ಪರೀಣಾಮ ಬೀರದು ಎಂದು ರಿಸರ್ವ್ ಬ್ಯಾಂಕ್ ನಿರ್ದೇಶಕ ಮಂಡಳಿ ಹೇಳಿತ್ತು.

“1000 ಹಾಗೂ 500 ಮುಖಬೆಲೆಯ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಈ ನಕಲಿ ನೋಟುಗಳ ಮೌಲ್ಯ ರೂ. 400 ಕೋಟಿಯಷ್ಟಾಗಬಹುದು ಎಂದು ಸಚಿವಾಲಯ ಹೇಳಿದ್ದರೆ, ಇದು ಅರ್ಥವ್ಯವಸ್ಥೆಯಲ್ಲಿರುವ ಒಟ್ಟು ನಗದಿನ ಒಂದು ಸಣ್ಣ ಅಂಶವಷ್ಟೇ ಹಾಗೂ ಅಷ್ಟು ಮಹತ್ವದ್ದಲ್ಲ'' ಎಂದು ರಿಸರ್ವ್ ಬ್ಯಾಂಕ್ ಮಂಡಳಿ ವಾದಿಸಿತ್ತು. ಪ್ರವಾಸೋದ್ಯಮ ಮತ್ತು ವೈದ್ಯಕೀಯ ರಂಗಗಳ ಮೇಲೆ ಅಮಾನ್ಯೀಕರಣ ದುಷ್ಪರಿಣಾಮ ಬೀರುವುದು ಎಂಬ ಲಿಖಿತ ಆಕ್ಷೇಪಣೆಯನ್ನೂ ರಿಸರ್ವ್ ಬ್ಯಾಂಕ್ ಮಂಡಳಿ ಮಾಡಿತ್ತು.

ಅಮಾನ್ಯೀಕರಣ ವಿಚಾರ ಕೇಂದ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ನಡುವೆ ಆರು ತಿಂಗಳು ಚರ್ಚಿಸಲಾಗಿತ್ತು ಎಂದೂ ಸಭೆಯಲ್ಲಿ ಉಲ್ಲೇಖಗೊಂಡಿರುವುದು ಸಭೆಯ ನಡಾವಳಿಯಲ್ಲಿ ನಮೂದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News