ಬೆಂಗಳೂರು: ಪ್ರಧಾನಿ ಮೋದಿ ಕ್ಷಮೆಯಾಚನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರಿಂದ ಧರಣಿ

Update: 2018-11-09 13:16 GMT

ಬೆಂಗಳೂರು, ನ.9: ಗರಿಷ್ಠ ಮುಖಬೆಲೆಯ 500 ಮತ್ತು 1 ಸಾವಿರ ನೋಟುಗಳು ಅಮಾನ್ಯೀಕರಣಗೊಂಡು ಇಂದಿಗೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಪ್ಪು ದಿನಾಚರಣೆ ಆಚರಿಸಿದ ರಾಜ್ಯ ಕಾಂಗ್ರೆಸ್ ನಾಯಕರು, ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್‌ನ ಹಿರಿಯ ನಾಯಕರು, ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ನೋಟು ಅಮಾನ್ಯೀಕರಣ ಮಾಡಿದ ಪರಿಣಾಮ, ದೇಶದ ಆರ್ಥಿಕ ವಹಿವಾಟಿಗೂ ಪೆಟ್ಟು ಬಿದ್ದಿದ್ದು, ಅವರು ಈ ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 1991ರಲ್ಲಿ ಭಾರತ ಚಿನ್ನವನ್ನು ಅಡವಿಡುವ ಮಟ್ಟಿಗೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು. ನಂತರ ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡಿದರು. ಆದರೆ, ಮೋದಿ, ಪ್ರಧಾನಿ ಆದ ನಂತರ ದೇಶವನ್ನು ಆರ್ಥಿಕವಾಗಿ ಅಧೋಗತಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.

ದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗದ ಮೋದಿ ಅವರು ಜನರನ್ನು ದಾರಿ ತಪ್ಪಿಸಲು ರಾಮಮಂದಿರ, ಬಾಬರಿ ಮಸೀದಿ ಎಂಬ ಭಾವನಾತ್ಮಕ ವಿಷಯಗಳನ್ನು ಕೆದಕುತ್ತಿದ್ದಾರೆ. ದೇಶ ಕಟ್ಟಲು ಬಿಜೆಪಿಯಿಂದ ಸಾಧ್ಯವಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷವೇ ಸೂಕ್ತ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ನೋಟು ಅಮಾನ್ಯೀಕರಣ ಯಾವ ಕಾರಣಕ್ಕಾಯಿತೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮೇಲಿಟ್ಟಿದ್ದ ನಿರೀಕ್ಷೆ ಸುಳ್ಳಾಗಿದೆ. ಟೀ ಮಾರಾಟ ಮಾಡಿ ಬೆಳೆದು ಬಂದ ನರೇಂದ್ರ ಮೋದಿ ಅವರಿಗೆ ಬಡವರ ಕಷ್ಟ ಗೊತ್ತಿದೆ. ಒಳ್ಳೆಯದು ಮಾಡುತ್ತಾರೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಅವರು ಜನಸಾಮಾನ್ಯರ ಬದಲಿಗೆ ಶ್ರೀಮಂತರ ಹಿತರಕ್ಷಣೆಗೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎರಡು ವರ್ಷದ ಹಿಂದೆ ನೋಟು ರದ್ದತಿ ಅರ್ಥ ವ್ಯವಸ್ಥೆ ಸುಧಾರಣೆಗೆ ಮದ್ದು ಎಂದು ಬಿಂಬಿಸಲಾಗಿತ್ತು. ಆದರೆ, ನೋಟು ಅಮಾನ್ಯೀಕರಣದಿಂದ ವಿತ್ತ ವ್ಯವಸ್ಥೆ ಸುಧಾರಿಸಿಕೊಳ್ಳಲಾರದಂತ ಸ್ಥಿತಿ ತಲುಪಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯ ಸೂಟು, ಬೂಟಿನ ಸರಕಾರದಿಂದ ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಸಾಮಾನ್ಯ ಜನರ ಕಷ್ಟಸುಖ ಈ ಸರಕಾರಕ್ಕೆ ಗೊತ್ತಾಗಲ್ಲ ಎಂದ ಅವರು, ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಆದರೆ, ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ, ಲೋಕಪಾಲ ನೇಮಕ ಮಾಡಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಎರಡು ವರ್ಷದ ಹಿಂದೆ ನೋಟ್ ಅಮಾನ್ಯ ಮಾಡಿ, ದೇಶದ 130 ಕೋಟಿ ಜನರ ಶೋಷಣೆ ಮಾಡಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಘೋರ ದುರಂತ ಎಂದು ನುಡಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಅಮರನಾಥ್ ಮಾತನಾಡಿ, ನೋಟು ಅಮಾನ್ಯ ಸರಿ. ಆದರೆ, ಇದರಿಂದ ಎಷ್ಟು ಕಪ್ಪುಹಣ ವಿದೇಶದಿಂದ ಭಾರತಕ್ಕೆ ವಾಪಸ್ಸು ತಂದಿದ್ದಾರೆ ಎಂದು ಬಿಜೆಪಿ ನಾಯಕರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕ ರೋಷನ್ ಬೇಗ್, ಮಾಜಿ ಶಾಸಕ ಆರ್.ವಿ.ದೇವರಾಜ್, ವಿಧಾನ ಪರಿಷತ್ ಸದಸ್ಯ ರಿಝ್ವನ್ ಅರ್ಶದ್, ಕಾಂಗ್ರೆಸ್ ಮುಖಂಡರಾದ ಎಂ.ಡಿ.ಲಕ್ಷ್ಮೀ ನಾರಾಯಣ, ನಾಗರಾಜ್ ಯಾದವ್, ಬಿಬಿಎಂಪಿ ಸದಸ್ಯರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಮನ್ ಕೀ ಬಾತ್ ಅಂದರೆ...

ಮನ್ ಕೀ ಬಾತ್ ಎಂದರೆ, ಪತಿರಾಯ, ತನ್ನ ಪತ್ನಿ ಜೊತೆ ಸುಖ-ದುಖಃ ಹಂಚಿಕೊಂಡು ಮಾತನಾಡುವುದು. ಆದರೆ, ಪ್ರಧಾನಿ ನರೇಂದ್ರ ಮೋದಿಯ ಮನ್ ಕೀ ಬಾತ್ ಜನರನ್ನು ದಿಕ್ಕು ತಪ್ಪಿಸುವ ಹಾದಿಯಾಗಿದೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

‘ಪ್ರಧಾನಿಗೆ ನೊಬೆಲ್ ಪ್ರಶಸ್ತಿ ನೀಡಿ’

ನೋಟು ಅಮಾನ್ಯೀಕರಣದಿಂದ ಭಾರತ ದೇಶದ ಆರ್ಥಿಕತೆ ತೀವ್ರ ಕುಂಠಿತವಾಗಿದ್ದು, ಇದಕ್ಕೆ ಮೂಲ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೊಬೆಲ್ ಪ್ರಶಸ್ತಿ ಪ್ರದಾನಿಸಬೇಕು. ತದನಂತರ, ಮೋದಿ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು.

-ವಿ.ಎಸ್.ಉಗ್ರಪ್ಪ, ಸಂಸದ, ಬಳ್ಳಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News