ನ.12ರಿಂದ 18ರ ವರೆಗೆ ಕಂದಾಯ ಇಲಾಖೆಯಲ್ಲಿ ‘ಕಡತ ವಿಲೇವಾರಿ ಸಪ್ತಾಹ’: ಸಚಿವ ದೇಶಪಾಂಡೆ

Update: 2018-11-09 12:49 GMT

ಬೆಂಗಳೂರು, ನ. 9: ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ನ.12ರಿಂದ 18ರ ವರೆಗೆ ಕಂದಾಯ ಇಲಾಖೆಯಲ್ಲಿ ‘ಕಡತ ವಿಲೇವಾರಿ ಸಪ್ತಾಹ’ ಆಚರಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕಡತಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗದೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜತೆಗೆ ಸಮಸ್ಯಾತ್ಮಕ ಕಡತಗಳನ್ನು ವಿಲೇ ಮಾಡಲಾಗುವುದು. ಕಡತಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಪ್ರಾದೇಶಿಕ ಆಯುಕ್ತರು, ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಲು ಸೂಚಿಸಲಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.

ಸಪ್ತಾಹದ ಕೊನೆಯ ದಿನವಾದ ನ.18ರಂದು ಸಂಬಂಧಿಸಿದ ಎಲ್ಲ ಅಧಿಕಾರಿಗಳೂ ಸಪ್ತಾಹವು ಆರಂಭವಾದ ದಿನವಾದ ನ.12ರಂದು ಬಾಕಿ ಇದ್ದ ಕಡತಗಳೆಷ್ಟು, ಸಪ್ತಾಹದ ಅವಧಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ವಿಲೇ ಮಾಡಿರುವ ಕಡತಗಳೆಷ್ಟು ಮತ್ತು ಸಪ್ತಾಹದ ಕೊನೆಯ ಹೊತ್ತಿಗೆ ಇನ್ನೂ ಬಾಕಿ ಇರುವ ಕಡತಗಳೆಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು rve@karnataka.gov.in ಗೆ ಕಡ್ಡಾಯವಾಗಿ ಕಳುಹಿಸಬೇಕು ಎಂದು ದೇಶಪಾಂಡೆ ಪ್ರಕಟಣೆಯಲ್ಲಿ ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News