×
Ad

ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ: ಸಚಿವ ಎಚ್.ಡಿ.ರೇವಣ್ಣ

Update: 2018-11-09 18:22 IST

ಬೆಂಗಳೂರು, ನ. 9: ರಾಜ್ಯದಲ್ಲಿನ ರಸ್ತೆಗಳ ಗುಣಮಟ್ಟ ಕಾಪಾಡುವ ವಿಚಾರದಲ್ಲಿ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಮುಂಭಾಗ ಲೋಕೋಪಯೋಗಿ ಇಲಾಖೆಯಿಂದ ಏರ್ಪಡಿಸಿದ್ದ ‘ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ’ ತಂತ್ರಾಂಶ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆಸ್ಥೆ ವಹಿಸಬೇಕೆಂದು ಸೂಚಿಸಿದರು.

ರಸ್ತೆ ಗುಣಮಟ್ಟ ಮತ್ತು ಸೇತುವೆಗಳ ಭೌತಿಕ ಮತ್ತು ಕ್ರಿಯಾತ್ಮಕ ಸ್ಥಿತಿಗತಿ ತಪಾಸಣಾ ವಾಹನವನ್ನು ಹೊಂದಿರುವ ಎರಡನೆ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದ ಅವರು, ಆಧುನಿಕ ತಾಂತ್ರಿಕತೆ ರಸ್ತೆಗಳ ಗುಣಮಟ್ಟ ಕಾಪಾಡಲು ಅನುಕೂಲವಾಗಲಿದೆ ಎಂದರು.

ಕಾಮಗಾರಿ ಶೀಘ್ರ ಆರಂಭ: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸಂಬಂಧ ಶೇ.80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ರೇವಣ್ಣ ಇದೇ ವೇಳೆ ತಿಳಿಸಿದರು.

840 ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿನ 690 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಾಲ್ಕನೆ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಜತೆಗೆ ಕೆಶಿಪ್ ಯೋಜನೆಯಡಿ ನಾಲ್ಕನೆ ಹಂತದಲ್ಲಿ 600 ಕಿ.ಮೀ ರಾಜ್ಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ರಸ್ತೆಗಳ ಗುಣಮಟ್ಟ ಸುಧಾರಿಸುವತ್ತ ಅಧಿಕಾರಿಗಳು ಗಮನಹರಿಸಬೇಕು. ಮಾನವ ಬಳಕೆಯಿಂದ ರಸ್ತೆಗಳ ಗುಣಮಟ್ಟವನ್ನು ಕರಾರುವಾಕ್ಕಾಗಿ ತಿಳಿಯುವುದು ಅಸಾಧ್ಯ. ಹೀಗಾಗಿ ರಸ್ತೆಗಳ ಗುಣಮಟ್ಟ ತಪಾಸಣೆಗೆ ಆಧುನಿಕ ತಾಂತ್ರಿಕತೆ ಅಗತ್ಯ ಎಂದರು.

ತಾಂತ್ರಿಕತೆ ಮತ್ತು ಆಧುನಿಕ ಯಂತ್ರೋಪಕರಣಗಳ ಮೂಲಕ ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ. ಜೊತೆಗೆ ಪಾರದರ್ಶಕತೆ ಕಾಪಾಡಬಹುದು ಎಂದ ದೇಶಪಾಂಡೆ, ಅತ್ಯಂತ ಹೆಚ್ಚು ಮಳೆ ಬೀಳುವ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ರಸ್ತೆಗಳ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಕಾಂಕ್ರಿಟ್ ರಸ್ತೆ ನಿರ್ಮಿಸಲು ಇಲಾಖೆ ಮುಂದಾಗಬೇಕೆಂದು ಸಲಹೆ ನೀಡಿದರು.

ಗಣ್ಯರ ಗೈರು: ಲೋಕೋಪಯೋಗಿ ಇಲಾಖೆ ಏರ್ಪಡಿಸಿದ್ದ ರಸ್ತೆಗಳ ಕಾರ್ಯಾಚರಣೆ ಮತ್ತು ತಂತ್ರಾಂಶಗಳ ಕೈಪಿಡಿ ಸಮಾರಂಭಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಯು.ಟಿ.ಖಾದರ್, ಕೃಷ್ಣಭೈರೇಗೌಡ, ಸಂಸದ ಪಿ.ಸಿ.ಮೋಹನ್ ಸಹಿತ ಹಲವು ಗಣ್ಯರು ಗೈರು ಹಾಜರಾಗಿದ್ದರು.

ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಎಡಿಬಿ ಮುಖ್ಯಸ್ಥ ಕೆಂಚಿ ಯಾಕೋ ಹ್ಯಾಮ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಇಲಾಖೆ ಕಾರ್ಯದರ್ಶಿ ಕೆ.ಎಸ್.ಕೃಷ್ಣಾರೆಡ್ಡಿ, ಕೆಶಿಪ್ ಮುಖ್ಯ ಯೋಜನಾಧಿಕಾರಿ ನವೀನ್ ರಾಜ್ ಸಿಂಗ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರಕ್ಕೆ ಪ್ರಸ್ತಾವನೆ

‘ದಕ್ಷಿಣ ಕನ್ನಡ, ಉಡುಪಿ, ಕಾರವಾರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲು ಮಡಿಕೇರಿ, ಶಿರಾಡಿ ಘಾಟ್, ಚಾರ್ಮಾಡಿ ಘಾಟ್, ಆಗುಂಬೆ ಸೇರಿದಂತೆ ನಾಲ್ಕು ಮಾರ್ಗಗಳಿವೆ. ಆದರೆ, ಹೆಚ್ಚಿನ ಭಾರದ ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದುದರಿಂದ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿರಾಡಿ ಘಾಟ್ ಮಾರ್ಗದಲ್ಲಿ ಟನಲ್ ರಸ್ತೆ ನಿರ್ಮಾಣ ಸಂಬಂಧ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 5ಸಾವಿರ ಕೋಟಿ ರೂ.ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’

-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News