ನ.16 ರಿಂದ ಆಳ್ವಾಸ್ ನುಡಿಸಿರಿ

Update: 2018-11-09 13:35 GMT

ಬೆಂಗಳೂರು, ನ.9: ಆಳ್ವಾಸ್‌ನ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ ಕಾರ್ಯಕ್ರಮವು ನ.16 ರಿಂದ ಮೂರು ದಿನಗಳ ಕಾಲ ಮಂಗಳೂರಿನ ಮೂಡುಬಿದಿರೆಯಲ್ಲಿ ನಡೆಯಲಿದೆ ಎಂದು ನುಡಿಸಿರಿ ಉಪಾಧ್ಯಕ್ಷ ಡಾ:ನಾ.ದಾಮೋದರ್ ಶೆಟ್ಟಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾಘಂಟಿ ಅವರು ಆಯ್ಕೆಯಾಗಿದ್ದಾರೆ. ಈ ಬಾರಿಯ ಸಮ್ಮೇಳನವು ಹಲವು ವಿಶೇಷತೆಗಳಿಂದ ಕೂಡಿದ್ದು, ಕರ್ನಾಟಕ ಇತಿಹಾಸವನ್ನು ಅವಲೋಕಿಸುವ ‘ಕರ್ನಾಟಕ ದರ್ಶನ’ ಸೇರಿದಂತೆ ವಿವಿಧ 8 ಉಪನ್ಯಾಸ ಕಾರ್ಯಕ್ರಮಗಳು ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ವಾಂಸ ಡಾ.ಪ್ರಭುಶಂಕರ್, ಡಾ.ಗಿರಡ್ಡಿ ಗೋವಿಂದರಾಜ ಹಾಗೂ ಜಿ.ಎಂ.ಹೆಗ್ಡೆ, ಸುಮತೀಂದ್ರ ನಾಡಿಗ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂತ ಶಿಶುನಾಳ ಶರೀಫರ 200 ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಡಾ.ಮಹೇಶ್ ಜೋಶಿ ದ್ವಿಶತಮಾನ ನಮನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಹಾಗೂ ಮಂಗಳಮುಖಿ ಎ.ರೇವತಿ ಅವರು ‘ನನ್ನ ಕಥೆ ನಿಮ್ಮ ಜೊತೆ’ ಎಂಬ ವಿಷಯದ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಜನರಿಗೆ ಸನ್ಮಾನ ಮಾಡಲಾಗುತ್ತದೆ. ರತ್ನಕರಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣ, ಕು.ಸಿ.ಹರಿದಾಸ್ ಭಟ್ ವೇದಿಕೆ ಮತ್ತು ಕಮಲಾಭಾಯಿ ಚಟ್ಟೋಪಾಧ್ಯಾಯ ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆಯುತ್ತವೆ. ಅಲ್ಲದೆ, ಡಾ.ವಿ.ಎಸ್. ಆಚಾರ್ಯ ಸಭಾಭವನ, ಭಗವಾನ್ ಶೆಟ್ಟಿ ವೇದಿಕೆ, ಕೆ.ಬಿ.ಸುಬ್ಬಣ್ಣ ಬಯಲು ರಂಗಮಂದಿರ, ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣ, ಆನಂದ್ ಬೋಳಾರ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News