ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಸಿಎಂ ಸೂಚನೆ: ಸಚಿವ ಝಮೀರ್ ಸ್ಪಷ್ಟನೆ
ಬೆಂಗಳೂರು, ನ.9: ‘ಮೈಸೂರು ಹುಲಿ’ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೊದಲೇ ತಿಳಿಸಿದ್ದರು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಯೂ ಕಾರ್ಯಕ್ರಮಕ್ಕೆ ಬರದಿದ್ದರೆ ಬಿಜೆಪಿಯವರು ಹಾಗೂ ಮಾಧ್ಯಮಗಳಿಗೆ ಅದೇ ದೊಡ್ಡ ಸುದ್ದಿಯಾಗುತ್ತದೆ. ಆದುದರಿಂದ, ತನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಬೇಡಿ ಎಂದು ಅವರು ಮೊದಲೆ ನಮಗೆ ತಿಳಿಸಿದ್ದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹಾಗೂ ನಾನು ನ.3ರಂದು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆವು. ಆ ವೇಳೆ ಅವರು ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯಬೇಕಾಗಿರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಒಂದು ವೇಳೆ ನಾನು ಬೆಂಗಳೂರಿನಲ್ಲೆ ಇದ್ದರೆ ಕಾರ್ಯಕ್ರಮಕ್ಕೆ ಬರುತ್ತೇನೆಂದು ಹೇಳಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಮುಖ್ಯಮಂತ್ರಿ ಕಚೇರಿಯಿಂದಲೇ ವಾರ್ತಾ ಇಲಾಖೆಗೆ ಕರೆ ಮಾಡಿ, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಸೂಚಿಸಿದ್ದರು. ಟಿಪ್ಪು ಜಯಂತಿ ಮಾಡಿದರೆ ಅಧಿಕಾರ ಕಳೆದು ಕೊಳ್ಳುತ್ತಾರೆ ಅನ್ನೋದೆಲ್ಲ ಸುಳ್ಳು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮೂರು ವರ್ಷ ಜಯಂತಿ ಆಚರಣೆ ಮಾಡಿ, ಪೂರ್ಣಾವಧಿಗೆ ಅಧಿಕಾರ ನಡೆಸಿದರು ಎಂದು ಅವರು ತಿಳಿಸಿದರು.
ಬಿಜೆಪಿಯವರು ಟಿಪ್ಪು ಜಯಂತಿ ಮಾಡಲಿಲ್ಲ. ಆದುದರಿಂದಲೇ, ಅಧಿಕಾರಕ್ಕೆ ಬಂದಿಲ್ಲ. ನಾಳೆ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ಇದು ಸಮ್ಮಿಶ್ರ ಸರಕಾರದ ಕಾರ್ಯಕ್ರಮ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಪ್ರತಿ ವರ್ಷವೂ ಜೆಡಿಎಸ್ ಕಚೇರಿಯಲ್ಲಿ ಟಿಪ್ಪುಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮೆಲ್ಲರಿಗೂ ಕುಮಾರಸ್ವಾಮಿ ಆರೋಗ್ಯ ಮುಖ್ಯ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಲಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಬಿಜೆಪಿ ಇದನ್ನೇ ಯಾಕೆ ರಾಜಕೀಯ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈ ಹಿಂದೆ ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಟಿಪ್ಪು ಜಯಂತಿ ಆಚರಿಸಿರುವುದನ್ನು ಮರೆತು, ಈಗ ವಿರೋಧ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಮುಖ್ಯಮಂತ್ರಿಗೆ ಬೇರೆ ಕಾರ್ಯಕ್ರಮಗಳಿರುವ ಕಾರಣದಿಂದ ಅವರು ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ವಿಚಾರವನ್ನು ಮೊದಲೆ ಅವರು ತಿಳಿಸಿದ್ದರು. ಅಧಿಕಾರ ಹೋಗುತ್ತದೆ ಎಂಬ ಭಯ ಯಾರಿಗೂ ಇಲ್ಲ. ಇದೀಗ ತಾನೆ ಉಪ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಯಾವ ಕಾರಣಕ್ಕಾಗಿ ನಮಗೆ ಭಯವಾಗಬೇಕು?
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
‘ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಕಾರಣದಿಂದಲೇ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ. ಜಯಂತಿ ಆಚರಣೆ ಮಾಡಿದ್ದರಿಂದ ಕಾಂಗ್ರೆಸ್ ಇಂದಿಗೂ ಅಧಿಕಾರದಲ್ಲಿದೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅಧಿಕಾರ ಹೋಗುತ್ತದೆ ಎಂದು ನಾನು, ಸಿಎಂ ಕುಮಾರಸ್ವಾಮಿಯವರಿಗೆ ಹೇಳಿದ್ದೇನೆಂಬುದು ಶುದ್ಧ ಸುಳ್ಳು. ನಾನು ಹಾಸನದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’
-ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ