ಗಾಂಧಿ ಚಿಂತಕರು -ಯುವ ಜನತೆಯೊಂದಿಗೆ ಸಂವಾದ ಕಾರ್ಯಕ್ರಮ
ಬೆಂಗಳೂರು, ನ.9: ಮಹಾತ್ಮ ಗಾಂಧೀಜಿಯ ಅಹಿಂಸಾ ತತ್ವಾದರ್ಶಗಳು ದೇಶದ ಜನತೆಯನ್ನು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಣೆ ನೀಡಿದ್ದವು. ಗಾಂಧೀಜಿಯ ಇಂತಹ ಚಿಂತನೆಗಳನ್ನು ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ವತಿಯಿಂದ ಪ್ರತಿತಿಂಗಳು ಗಾಂಧೀ ಅಂಗಳದಲ್ಲಿ ಗಾಂಧಿ ಚಿಂತಕರು ಅನುಭಾವಿಕರೊಂದಿಗೆ ಒಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿತಿಂಗಳು ಹಿರಿಯ ಸಾಧಕರೊಂದಿಗೆ ‘ಮನೆಯಂಗಳದಲ್ಲಿ ಮಾತಕತೆ’, ಕರ್ನಾಟಕ ಲೇಖಕಿಯರ ಸಂಘವು ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮಗಳು ರಾಜ್ಯಾದ್ಯಂತ ಜನಪ್ರಿಯಗೊಂಡು ಹೆಸರುವಾಸಿಯಾಗಿದೆ. ಇಂತಹದ್ದೆ ಮಾದರಿಯಲ್ಲಿ ಗಾಂಧಿ ತತ್ವಾದರ್ಶಗಳಲ್ಲಿ ಜೀವನ ಸಾಗಿಸುತ್ತಿರುವವರ ಬದುಕು-ಬವಣೆ ಹಾಗೂ ಅನುಭವಗಳನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ತಿಳಿಸಿದರು.
ಈಗಾಗಲೆ ಗಾಂಧಿ ಅಂಗಳದಲ್ಲಿ ಗಾಂಧಿ ಚಿಂತಕರು ಅನುಭಾವಿಕರೊಂದಿಗೆ ಒಂದು ಸಂವಾದ ಕಾರ್ಯಕ್ರಮಕ್ಕಾಗಿ ಭಾಗವಹಿಸುವಂತೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಂಧಿವಾದಿ ಗೊ.ರು.ಚೆನ್ನಬಸಪ್ಪ ಸೇರಿದಂತೆ 15ಮಂದಿ ಹಿರಿಯ ಚಿಂತಕರನ್ನು ಆಹ್ವಾನಿಸಲಾಗಿದೆ. ಅವರ ಬಿಡುವಿನ ಸಮಯವನ್ನು ಗೊತ್ತು ಮಾಡಿಕೊಂಡು ದಿನಾಂಕಗಳನ್ನು ನಿಗದಿ ಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಗಾಂಧಿ ಕುರಿತ ಸಂವಾದ ಕಾರ್ಯಕ್ರಮಕ್ಕೆ ಕೇವಲ ರಾಜಕೀಯ ಹಾಗೂ ಸಾಹಿತ್ಯ ವಲಯದ ಗಾಂಧಿವಾದಿಗಳನ್ನು ಮಾತ್ರ ಆಹ್ವಾನಿಸುವುದಿಲ್ಲ. ಸಿನೆಮಾ, ಉದ್ಯಮ, ಕಾರ್ಮಿಕ, ಆರೋಗ್ಯ ಸೇರಿದಂತೆ ಯಾವುದೆ ಕ್ಷೇತ್ರದಲ್ಲಿ ಗಾಂಧಿ ತತ್ವಗಳನ್ನು ಪಾಲಿಸುತ್ತಿರುವವರ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲಾಗುವ ಉದ್ದೇಶ ಹೊಂದಲಾಗಿದೆ ಎಂದು ಇಂದಿರಾ ಕೃಷ್ಣಪ್ಪ ತಿಳಿಸಿದರು.
ನ.12ರಂದು ಬೆಳಗ್ಗೆ 11ಕ್ಕೆ ನಗರದ ಗಾಂಧಿ ಭವನದಲ್ಲಿ ‘ಗಾಂಧೀ ಅಂಗಳದಲ್ಲಿ ಗಾಂಧಿ ಚಿಂತಕರು ಅನುಭಾವಿಕರೊಂದಿಗೆ ಒಂದು ಸಂವಾದ’ ಕಾರ್ಯಕ್ರಮವು ಪ್ರಾರಂಭಗೊಳ್ಳುತ್ತಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಬೇ.ಗೋ.ರಮೇಶ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.