‘ಬಡವರ ಬಂಧು’ ಯೋಜನೆಗೆ ನ.22ರಂದು ಚಾಲನೆ: ಸಚಿವ ಬಂಡೆಪ್ಪ ಕಾಶೆಂಪೂರ್
ಬೆಂಗಳೂರು, ನ. 9: ಪಟ್ಟಣ ಪ್ರದೇಶದ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರಕಾರ ರೂಪಿಸಿರುವ, ಶೂನ್ಯಬಡ್ಡಿ ದರದಲ್ಲಿ ಕಿರುಸಾಲ ನೀಡುವ ‘ಬಡವರ ಬಂಧು’ ಯೋಜನೆಗೆ ನ.22ರಂದು ಚಾಲನೆ ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳನ್ನು ಖಾಸಗಿ ಸಾಲಗಾರರ ಹಿಡಿತದಿಂದ ಮುಕ್ತಗೊಳಿಸಲು ‘ಬಡವರ ಬಂಧು’ ಯೋಜನೆಯನ್ನು ರೂಪಿಸಲಾಗಿದೆ. 2 ಸಾವಿರ ರೂ.ನಿಂದ 10 ಸಾವಿರ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದರು.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ ವ್ಯಾಪಾರಿಗಳಿಗೆ, ಉಳಿದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಲಾ 3 ಸಾವಿರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತಲಾ 1 ಸಾವಿರ ವ್ಯಾಪಾರಿಗಳಂತೆ 50 ಸಾವಿರ ಮಂದಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಶೂನ್ಯ ಬಡ್ಡಿಯಡಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲೂ ಈ ಯೋಜನೆಗೆ ಒಂದು ಮೊಬೈಲ್ ವ್ಯಾನ್ ನೀಡಲಾಗುವುದು. ಒಂದು ಬ್ಯಾಂಕಿನ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದ ಅವರು, ಪ್ರತಿನಿತ್ಯ 100 ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ರಾಮೀಣ ಮಹಿಳೆಯರಿಗೆ ‘ಕಾಯಕ’: ಗ್ರಾಮೀಣ ಮಹಿಳೆಯರಿಗೆ ಸ್ವಂತ ಉದ್ದಿಮೆ ಸ್ಥಾಪಿಸಲು ಆರ್ಥಿಕ ನೆರವು ನೀಡಿ ಅವರನ್ನು ಸ್ವಾವಲಂಬಿಗೊಳಿಸಲು ‘ಕಾಯಕ’ ಯೋಜನೆಯನ್ನು ನ.22ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಜಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಋಣಮುಕ್ತ: ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ 2.20ಲಕ್ಷ ರೈತರು ಮಾಹಿತಿ ನೀಡಿದ್ದು, ಈ ತಿಂಗಳ ಕೊನೆಗೆ ಅವರಿಗೆ ಋಣಮುಕ್ತ ಪತ್ರ ನೀಡುತ್ತೇವೆ ಎಂದ ಬಂಡೆಪ್ಪ ಕಾಶೆಂಪೂರ, ಸಾಲ ಮರುಪಾವತಿ ಸಂಬಂಧ ಸಹಕಾರ ಬ್ಯಾಂಕುಗಳ ಮೂಲಕ ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಣೆ ನೀಡಿದರು.
ನ.14ರಿಂದ ಸಹಕಾರ ಸಪ್ತಾಹ: ಸಹಕಾರ ಕ್ಷೇತ್ರದ ಸಾಧನೆಯನ್ನು ತಿಳಿಸಲು ಚಿಂತನ ಮಂಥನ ಕಾರ್ಯಕ್ರಮ ನಡೆಸಲು ನ.14ರಿಂದ 20ರ ವರೆಗೆ ಸಹಕಾರ ಸಪ್ತಾಹ ಏರ್ಪಡಿಸಿದ್ದು, ‘ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ’ ಎಂಬ ಧ್ಯೇಯವನ್ನು ಹೊಂದಿದೆ ಎಂದರು.
ನ.14ರಂದು ಬೀದರ್‌ನಲ್ಲಿ ಸಿಎಂ ಕುಮಾರಸ್ವಾಮಿ ಸಪ್ತಾಹ ಉದ್ಘಾಟಿಸಲಿದ್ದು, ನ.15ಕ್ಕೆ ಶಿರಸಿ, 16ಕ್ಕೆ ರಾಯಚೂರು, ಬೆಂಗಳೂರು-17ಕ್ಕೆ, ಹಾವೇರಿ-18ಕ್ಕೆ, ಕೋಲಾರ-19ಕ್ಕೆ ಹಾಗೂ ನ.20ಕ್ಕೆ ಶಿವಮೊಗ್ಗದಲ್ಲಿ ಸಪ್ತಾಹ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಲಾಗುತ್ತಿದ್ದು, ನ.14ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಹಕಾರ ಸಪ್ತಾಹದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಬಂಡೆಪ್ಪ ಕಾಶೆಂಪೂರ್ ಹೇಳಿದರು.