ಟಿಪ್ಪು ಜಯಂತಿಗೆ ವಿರೋಧ: ಬಿಜೆಪಿಯ ಸಂಕುಚಿತ ಮನಸ್ಥಿತಿಯ ಪ್ರದರ್ಶನ; ವಿ.ಎಸ್.ಉಗ್ರಪ್ಪ

Update: 2018-11-09 14:06 GMT

ಬೆಂಗಳೂರು, ನ.9: ರಾಜಕೀಯ ಕಾರಣಕ್ಕಾಗಿ ಬಿಜೆಪಿ ನಾಯಕರು, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಇದು ಅವರ ಸಂಕುಚಿತ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕರ ಭವನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ, ವಿಧಾನಸೌಧದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

2012-13ರಲ್ಲಿ ಯಡಿಯೂರಪ್ಪ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಈಗ ಅದನ್ನು ಮರೆತು, ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು. ರಾಷ್ಟ್ರಪ್ರೇಮಿಯನ್ನು ರಾಷ್ಟ್ರದ್ರೋಹಿ ಎಂದು ಬಿಂಬಿಸುವ ಕೆಲಸವನ್ನು ಯಾರೂ ಮಾಡಬಾರದು. ಮೂಲತಃ ಬಿಜೆಪಿ ಪಕ್ಷದವರಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ, ವಿಧಾನಸೌಧದ ವಜ್ರ ಮಹೋತ್ಸವದಲ್ಲಿ ಭಾಷಣ ಮಾಡುವಾಗ ಟಿಪ್ಪು ಸುಲ್ತಾನ್ ದೇಶಪ್ರೇಮಿ, ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಯೋಧ ಎಂದು ಬಣ್ಣಿಸಿದ್ದನ್ನು ಬಿಜೆಪಿಯವರು ಮರೆತಿದ್ದಾರೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.

ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಗೈರಾಗುತ್ತಿರುವ ವಿಚಾರದ ಬಗ್ಗೆ ತನಗೆ ಗೊತ್ತಿಲ್ಲ. ಟಿಪ್ಪು ಜಯಂತಿಯನ್ನು ಕಾಟಾಚಾರಕ್ಕೆ ಮಾಡಲು ಸಾಧ್ಯವಿಲ್ಲ. ದೇಶಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರನ ಬಗ್ಗೆ ಯಾರೊಬ್ಬರೂ ಅಸಡ್ಡೆ ತೋರಬಾರದು ಎಂದು ಉಗ್ರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News