×
Ad

ಬೆಂಗಳೂರು: ನೋಟು ಅಮಾನ್ಯೀಕರಣ ಖಂಡಿಸಿ ಪ್ರತಿಭಟನೆ

Update: 2018-11-09 19:46 IST

ಬೆಂಗಳೂರು, ನ.9: ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವ ಕ್ರಮ ಖಂಡಿಸಿ ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್(ಎಸ್‌ಡಿಸಿ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಇಂದಿಗೆ ನೋಟು ಅಮಾನ್ಯೀಕರಣ ಆಗಿ ಎರಡು ವರ್ಷ ತುಂಬಿದ್ದು, ಯಾವುದೇ ಪೂರ್ವ ತಯಾರಿ ಇಲ್ಲದೆ ನೋಟುಗಳನ್ನು ಕೇಂದ್ರ ಸರಕಾರ ನಿಷೇಧಿಸಿ, ರೈತರು ಹಾಗೂ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸ್ವಜನ ಪಕ್ಷಪಾತ ನಡೆಸುತ್ತಿದೆ. ಅದರ ಕೆಲವು ನಾಯಕರಿಗೆ ನೋಟು ನಿಷೇಧ ಮುಂಚಿತವಾಗಿ ತಿಳಿದಿತ್ತು. ಕೇವಲ ಜನ ಸಾಮಾನ್ಯರಿಗೆ ಕಿರುಕುಳ ನೀಡಲು ಈ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನಿ ಮೋದಿ ಅವರಿಗೆ ಆಡಳಿತದಲ್ಲಿ ಅನುಭವದ ಕೊರತೆ ಇರುವುದು ಇದರಿಂದ ಕಂಡು ಬರುತ್ತಿದೆ ಎಂದು ಪಕ್ಷದ ಕಾರ್ಯಕರ್ತರು ದೂರಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಸಿ ರಾಜ್ಯಾಧ್ಯಕ್ಷ ಆರ್.ಎ.ಜಾನಬ್, ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜಾರಿಗೊಳಿಸಿರುವುದರ ಹಿಂದಿನ ಮರ್ಮವನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.

ಲೋಕಸಭಾ ಚುನಾವಣೆ ಸಂದರ್ಭ ಅಧಿಕಾರಕ್ಕೆ ಬಂದಲ್ಲಿ ನೂರು ದಿನಗಳ ಒಳಗಾಗಿ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಇಲ್ಲಿತನಕ ಸಾಧ್ಯವಾಗಲಿಲ್ಲ. ಎರಡು ವರ್ಷದ ಹಿಂದೆ 1 ಸಾವಿರ ಹಾಗೂ 500 ರೂ. ನೋಟುಗಳನ್ನು ನಿಷೇಧಿಸಿದ ಪರಿಣಾಮ ಶೇ. 70 ರಷ್ಟು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗಿದೆ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News