ರಜನೀಕಾಂತ್ ತಮಿಳು ಸಿನೆಮಾ ಬಿಡುಗಡೆಗೆ ಅವಕಾಶ ಬೇಡ: ವಾಟಾಳ್ ನಾಗರಾಜ್

Update: 2018-11-09 14:24 GMT

ಬೆಂಗಳೂರು, ನ.9: ನಟ ರಜನೀಕಾಂತ್ ಅಭಿಯನದ 2.0 ತಮಿಳು ಸಿನೆಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಶುಕ್ರವಾರ ಪರಭಾಷಿಗರ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗವನ್ನು ಉಳಿಸಿ-ಬೆಳೆಸಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ತಮಟೆ ಚಳವಳಿ ನಡೆಸಿ ಅವರು ಮಾತನಾಡಿದರು. ಸದ್ಯದಲ್ಲೇ ತಮಿಳುನಟ ರಜನಿಕಾಂತ್ ಅವರ ಸಿನೆಮಾ 2.0 ತೆರೆ ಕಾಣಲಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಬುಕ್ ಆಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೆ ನಷ್ಟವಾಗಲಿದೆ. ಹೀಗಾಗಿ ಕೇವಲ ಎರಡು ಇಲ್ಲವೆ ಮೂರು ಚಿತ್ರಮಂದಿರಗಳಲ್ಲಿ ಮಾತ್ರ 2.0 ಸಿನೆಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.

ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕಿಂತ ಪರಭಾಷೆಗಳ ಚಿತ್ರ ಪ್ರದರ್ಶನ ಹೆಚ್ಚಾಗಿದ್ದು, ಕನ್ನಡ ಚಿತ್ರರಂಗ ಅಧೋಗತಿಗೆ ಇಳಿಯುತ್ತಿದೆ. ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಕೋಟಿ ಕೋಟಿ ರೂ.ಗಳನ್ನು ಬಾಚುತ್ತಿವೆ. ಆದರೆ, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೆ ನಿರ್ಮಾಪಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡ ಚಿತ್ರರಂಗ ಉಳಿಯಬೇಕಾದರೆ ಎಲ್ಲ ಚಿತ್ರ ಮಂದಿರಗಳಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶ ಸಿಗಬೇಕು. ಪರಭಾಷೆ ಚಿತ್ರಗಳಿಗೆ ಎರಡು ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕಾಯ್ದೆಯೊಂದನ್ನು ರೂಪಿಸಬೇಕೆಂದು ಅವರು ಹೇಳಿದರು.

ಹಿಂದಿನ ದಿನಗಳಲ್ಲಿ ಎಲ್ಲ ಚಿತ್ರಮಂದಿರಗಳಲ್ಲೂ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿದ್ದವು. ಈಗ ಕನ್ನಡ ಸಿನೆಮಾ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳನ್ನು ದುರ್ಬಿನ್ ಹಾಕಿಕೊಂಡು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಕನ್ನಡ ಚಿತ್ರರಂಗ ಇತಿಹಾಸ ಸೇರಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬಿಬಿಎಂಪಿ ಕಚೇರಿಯಲ್ಲಿ ತಮಿಳು ಸಿನೆಮಾವೊಂದರ ಚಿತ್ರೀಕರಣ ನಡೆಸಿರುವುದು ಬೆಳಕಿಗೆ ಬಂದಿದೆ. ಕನ್ನಡದ ಅಸ್ಮಿತೆಯ ಕೇಂದ್ರವಾದ ಬಿಬಿಎಂಪಿ ಕಚೇರಿಯಲ್ಲಿ ಪರಭಾಷ ಚಿತ್ರದ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದಾದರೂ ಯಾರು. ಈ ಪ್ರಕರಣದ ಹಿಂದೆ ಸಾಕಷ್ಟು ಗೊಂದಲಗಳಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ನ.12ರಂದು ಬಿಬಿಎಂಪಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು.

-ವಾಟಾಳ್ ನಾಗರಾಜ್, ಅಧ್ಯಕ್ಷ, ಕನ್ನಡ ಚಳವಳಿ ವಾಟಾಳ್ ಪಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News