ಇಂದು ಮೂರನೇ ಟ್ವೆಂಟಿ-20: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

Update: 2018-11-10 18:47 GMT

ಚೆನ್ನೈ, ನ.10: ಈಗಾಗಲೇ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ರವಿವಾರ ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸುವುದರೊಂದಿಗೆ ಕ್ಲೀನ್‌ಸ್ವೀಪ್ ಸಾಧಿಸುವ ಗುರಿ ಹಾಕಿಕೊಂಡಿದೆ.

ಲಕ್ನೋದಲ್ಲಿ ಎರಡನೇ ಟ್ವೆಂಟಿ-20 ಪಂದ್ಯವನ್ನು ಸುಲಭವಾಗಿ ಜಯಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿರುವ ರೋಹಿತ್ ಪಡೆ ಆಸ್ಟ್ರೇಲಿಯ ಪ್ರವಾಸ ಆರಂಭಕ್ಕೆ ಮೊದಲು ಅವಕಾಶವಂಚಿತ ಆಟಗಾರರನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ.

ಮೂರನೇ ಟ್ವೆಂಟಿ-20 ಪಂದ್ಯಕ್ಕಿಂತ ಮೊದಲು ಆಯ್ಕೆಗಾರರು ಜಸ್‌ಪ್ರಿತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ವಾಶಿಂಗ್ಟನ್ ಸುಂದರ್ ತವರು ಮೈದಾನದಲ್ಲಿ ಆಡುವ ಅವಕಾಶ ಪಡೆಯಬಹುದು. ಭಾರತ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್ ಅವಕಾಶ ಪಡೆಯುತ್ತಾರೋ ಎಂದು ಕಾದುನೋಡಬೇಕಾಗಿದೆ.

ನಾಯಕ ರೋಹಿತ್ ಶರ್ಮಾ ಲಕ್ನೋದಲ್ಲಿ ನಡೆದ ಟ್ವೆಂಟಿ-20ಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಆದರೆ ಭಾರತದ ಇತರ ಆಟಗಾರರು ದೊಡ್ಡ ಕೊಡುಗೆ ನೀಡಿಲ್ಲ. ಶಿಖರ್ ಧವನ್, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಆಸ್ಟ್ರೇಲಿಯಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳುವ ಮೊದಲು ಒಂದಷ್ಟು ರನ್ ಗಳಿಸಲು ಯೋಚಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ 110 ರನ್ ಗುರಿ ಪಡೆದಿದ್ದ ಭಾರತದ ಪರ ದಿನೇಶ್ ಕಾರ್ತಿಕ್ ಲೆಕ್ಕಾಚಾರದ ಇನಿಂಗ್ಸ್ ಆಡಿದ್ದರು. ಬುಮ್ರಾ ಹಾಗೂ ಕುಲ್‌ದೀಪ್‌ಗೆ ವಿಶ್ರಾಂತಿ ನೀಡಿದರೆ ಭುವನೇಶ್ವರ ಕುಮಾರ್ ಹಾಗೂ ಖಲೀಲ್ ಅಹ್ಮದ್ ಬೌಲಿಂಗ್ ದಾಳಿಯ ನೇತೃತ್ವವಹಿಸಿಕೊಳ್ಳಲಿದ್ದಾರೆ.

ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲ್‌ದೀಪ್ ಅನುಪಸ್ಥಿತಿಯಲ್ಲಿ ಯಜುವೇಂದ್ರ ಚಹಾಲ್ ವಾಪಸಾಗುವ ನಿರೀಕ್ಷೆಯಿದೆ. ಕೃನಾಲ್ ಪಾಂಡ್ಯ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಏಕದಿನ ಸರಣಿಯಲ್ಲಿ ಭಾರತಕ್ಕೆ ಅನಿರೀಕ್ಷಿತ ಸವಾಲು ಒಡ್ಡಿದ್ದ ಪ್ರವಾಸಿ ವಿಂಡೀಸ್ ತಂಡ ಟ್ವೆಂಟಿ-20ಯಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ. ಖಾಯಂ ಆರಂಭಿಕ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಎವಿನ್ ಲೂಯಿಸ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಕಿರೊನ್ ಪೊಲಾರ್ಡ್, ಡರೆನ್ ಬ್ರಾವೊ ಹಾಗೂ ದಿನೇಶ್ ರಾಮ್ದಿನ್ ಸಿಡಿದೇಳಲು ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ವಿಂಡೀಸ್ ಇಬ್ಬರು ವಿಕೆಟ್‌ಕೀಪರ್‌ಗಳನ್ನು ಆಡಿಸಿತ್ತು. ರಾಮ್ದಿನ್ ಕಳಪೆ ಫಾರ್ಮ್‌ನಲ್ಲಿರುವ ಕಾರಣ ಆಲ್‌ರೌಂಡರ್ ಪೊವೆಲ್‌ಗೆಅವಕಾಶ ನೀಡಿ, ನಿಕೊಲಸ್ ಪೂರನ್‌ಗೆ ಕೀಪಿಂಗ್ ಜವಾಬ್ದಾರಿವಹಿಸುವ ಸಾಧ್ಯತೆಯಿದೆ.

ಬೌಲರ್‌ಗಳ ಪೈಕಿ ಒಶಾನೆ ಥಾಮಸ್ ವೇಗದ ಬೌಲಿಂಗ್ ಮೂಲಕ ವಿಕೆಟ್ ಪಡೆಯುತ್ತಿದ್ದಾರೆ. ಆದರೆ, ಅವರಿಗೆ ಉಳಿದ ಬೌಲರ್‌ಗಳು ಸಾಥ್ ನೀಡುತ್ತಿಲ್ಲ.

ಕೋಲ್ಕತಾದಲ್ಲಿ ನಡೆದ 2016ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನ ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದ ಬ್ರಾತ್‌ವೇಟ್ ತನ್ನ ಪ್ರತಿಭೆ ಪ್ರದರ್ಶಿಸಲು ಎದುರು ನೋಡುತ್ತಿದ್ದಾರೆ. ಬಲಿಷ್ಠ ಭಾರತ ತಂಡದ ವಿರುದ್ಧ ಕೊನೆಯ ಪಂದ್ಯವನ್ನು ಜಯಿಸಿ ತಂಡದ ಮರ್ಯಾದೆ ಕಾಪಾಡುವ ವಿಶ್ವಾಸದಲ್ಲಿದ್ದಾರೆ.

ಪಿಚ್ ಹಾಗೂ ವಾತಾವರಣ

ಚೆನ್ನೈ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ. ಆದರೆ, ಇಬ್ಬನಿ ಬಿದ್ದಾಗ ಏನಾಗುತ್ತದೆಂದು ಹೇಳಲು ಸಾಧ್ಯವಿಲ್ಲ.

ಅಂಕಿ ಅಂಶ

►ವೆಸ್ಟ್‌ಇಂಡೀಸ್ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 47ರಲ್ಲಿ ಜಯ ಹಾಗೂ 49ರಲ್ಲಿ ಸೋತಿದೆ. ವಿಶ್ವ ಟಿ-20 ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದೆ. ಎರಡು ಬಾರಿ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಿರುವ ವಿಂಡೀಸ್ ವಿಶ್ವದೆಲ್ಲೆಡೆ ನಡೆಯುವ ಟ್ವೆಂಟಿ-20 ಲೀಗ್‌ನಲ್ಲಿ ಶ್ರೇಷ್ಠ ಆಟಗಾರರನ್ನು ನೀಡುತ್ತಾ ಬಂದಿದೆ.

►ಇದೀಗ ಚೆನ್ನೈನಲ್ಲಿ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಆರು ವರ್ಷಗಳ ಹಿಂದೆ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭಾರತವನ್ನು ಕೇವಲ 1 ರನ್‌ನಿಂದ ಮಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News