ಮೊದಲ ಮಹಾಯುದ್ಧಕ್ಕೆ 100 ವರ್ಷ: ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದ ಪ್ರಧಾನಿ

Update: 2018-11-11 14:05 GMT

ಹೊಸದಿಲ್ಲಿ, ನ.11: ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಯುದ್ಧದಿಂದ ಸಂಭವಿಸುವ ಸಾವು ಮತ್ತು ನಷ್ಟಗಳು ಮರುಕಳಿಸದಂತೆ ಪ್ರಯತ್ನಿಸುವ ಮತ್ತು ವಿಶ್ವಶಾಂತಿಗೆ ಶ್ರಮಿಸುವ ದೇಶದ ಬದ್ಧತೆಯನ್ನು ಪುನರುಚ್ಚರಿಸಿದರು.

ಭಯಾನಕ ಮೊದಲ ಮಹಾಯುದ್ಧ ಕೊನೆಗೊಂಡ ನೂರನೇ ವರ್ಷದ ಸಂದರ್ಭದಲ್ಲಿ ವಿಶ್ವಶಾಂತಿ ನೆಲೆಸುವತ್ತ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತಿದ್ದೇವೆ. ವಿಶ್ವದಾದ್ಯಂತ ಸೌಹಾರ್ದತೆ ಮತ್ತು ಭ್ರಾತೃತ್ವದ ವಾತಾವರಣ ನೆಲೆಸಲು ಶ್ರಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಸರಣಿ ಟ್ವೀಟ್ ಮಾಡಿರುವ ಮೋದಿ ಹೇಳಿದ್ದಾರೆ.

ಮೊದಲ ಮಹಾಯುದ್ಧದಲ್ಲಿ ಭಾರತ ನೇರವಾಗಿ ಶಾಮೀಲಾಗಿರಲಿಲ್ಲ. ಆದರೂ ನಮ್ಮ ಧೀರ ಯೋಧರು, ವಿಶ್ವಶಾಂತಿಯ ಏಕೈಕ ಉದ್ದೇಶದಿಂದ ವಿಶ್ವದಾದ್ಯಂತ ಹೋರಾಟ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿರುವ ಮೋದಿ, ತನಗೆ ಇಸ್ರೇಲ್‌ನ ಹೈಫಾದಲ್ಲಿ ಹಾಗೂ ಫ್ರಾನ್ಸ್‌ನ ನ್ಯೂ-ಚಾಪೆಲ್ ಸ್ಮಾರಕಗಳಲ್ಲಿ ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಅವಕಾಶ ದೊರಕಿತ್ತು. ಅದೇ ರೀತಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ್ದಾಗ ತೀನ್‌ಮೂರ್ತಿ- ಹೈಫಾ ಚೌಕದಲ್ಲಿ ಗೌರವ ನಮನ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News