ಟ್ವೆಂಟಿ-20: ವಿಂಡೀಸ್ ವಿರುದ್ಧ ಕೊನೆಯ ಎಸೆತದಲ್ಲಿ ಜಯ ಸಾಧಿಸಿದ ಭಾರತ

Update: 2018-11-11 17:06 GMT

 ಚೆನ್ನೈ, ನ.11: ಆರಂಭಿಕ ಆಟಗಾರ ಶಿಖರ್ ಧವನ್(92) ಹಾಗೂ ವಿಕೆಟ್‌ಕೀಪರ್ ರಿಷಭ್ ಪಂತ್(58) 3ನೇ ವಿಕೆಟ್‌ಗೆ ಸೇರಿಸಿದ 130 ರನ್ ಜೊತೆಯಾಟದ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ 6 ವಿಕೆಟ್‌ಗಳಿಂದ ಜಯ ದಾಖಲಿಸಿದೆ.

ಈ ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.

ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದ ಭಾರತಕ್ಕೆ ಕೊನೆಯ ಓವರ್‌ನಲ್ಲಿ 5 ರನ್ ಅಗತ್ಯವಿತ್ತು. ತಂಡಕ್ಕೆ ಒಂದು ರನ್ ಅಗತ್ಯವಿದ್ದಾಗ ಧವನ್ ಔಟಾದರು. ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಒಂಟಿ ರನ್ ಗಳಿಸಲು ಯಶಸ್ವಿಯಾದ ಮನೀಷ್ ಪಾಂಡೆ ತಂಡಕ್ಕೆ ರೋಚಕ ಜಯ ತಂದರು.

ಧವನ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(4)ಇನಿಂಗ್ಸ್‌ನ 3ನೇ ಓವರ್‌ನ ಎರಡನೇ ಎಸೆತದಲ್ಲಿ ಔಟಾದರು. ಕೆಎಲ್ ರಾಹುಲ್ 15 ರನ್ ಗಳಿಸಿ ಥಾಮಸ್‌ಗೆ ವಿಕೆಟ್ ಒಪ್ಪಿಸಿದರು. ಆಗ 3ನೇ ವಿಕೆಟ್‌ಗೆ ಪಂತ್‌ರೊಂದಿಗೆ ಶತಕದ ಜೊತೆಯಾಟ ನಡೆಸಿದ ಧವನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 62 ಎಸೆತಗಳನ್ನು ಎದುರಿಸಿದ ಧವನ್ 10 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 92 ರನ್ ಗಳಿಸಿದರು. ಇದು ಟ್ವೆಂಟಿ-20ಯಲ್ಲಿ ಧವನ್ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್. ವಿಂಡೀಸ್ ಪರ ಪಾಲ್ 2 ವಿಕೆಟ್ ಪಡೆದಿದ್ದಾರೆ.

ಇದಕ್ಕೆ ಮೊದಲು ಟಾಸ್ ಜಯಿಸಿದ ವಿಂಡೀಸ್ ನಾಯಕ ಕ್ರೆಗ್ ಬ್ರಾತ್‌ವೇಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಿಕೊಲಸ್ ಪೂರನ್ ಮಿಂಚಿನ ವೇಗದಲ್ಲಿ ಸಿಡಿಸಿದ ಚೊಚ್ಚಲ ಅರ್ಧಶತಕ(53,25 ಎಸೆತ) ಹಾಗೂ ಡ್ವೆಯ್ನೆ ಬ್ರಾವೊ ಅವರ ಜವಾಬ್ದಾರಿಯುತ ಬ್ಯಾಟಿಂಗ್(ಔಟಾಗದೆ 43 ರನ್)ನೆರವಿನಿಂದ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 181 ರನ್ ಕಲೆ ಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News