ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧದ ತನಿಖೆ ನಾಳೆ ಸುಪ್ರೀಂಕೋರ್ಟ್‌ಗೆ ಸಿವಿಸಿ ಹೇಳಿಕೆ

Update: 2018-11-11 17:57 GMT

ಹೊಸದಿಲ್ಲಿ, ನ.11: ಕಡ್ಡಾಯ ರಜೆಯಲ್ಲಿ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿರುವ ಕೇಂದ್ರ ಜಾಗೃತ ಆಯೋಗ(ಸಿವಿಸಿ)ದ ಹೇಳಿಕೆಯನ್ನು ಸೋಮವಾರ ಸುಪ್ರೀಂಕೋರ್ಟ್ ಆಲಿಸಲಿದೆ.

ಅಲೋಕ್ ಕುಮಾರ್ ವರ್ಮ ವಿರುದ್ಧದ ಪ್ರಾಥಮಿಕ ತನಿಖೆಯನ್ನು ಎರಡು ವಾರದೊಳಗೆ ಮುಗಿಸಬೇಕೆಂದು ಸುಪ್ರೀಂಕೋರ್ಟ್ ಈ ಹಿಂದೆ ಕೇಂದ್ರ ಜಾಗೃತ ಆಯೋಗಕ್ಕೆ ಸೂಚಿಸಿತ್ತು. ವಿಶೇಷ ಸಿಬಿಐ ನಿರ್ದೇಶಕ ರಾಕೇಶ್ ಅಸ್ತಾನರೊಂದಿಗೆ ಮನಸ್ತಾಪ ಹೊಂದಿರುವ ಅಲೋಕ್ ವರ್ಮ ಈಗಾಗಲೇ ಕೇಂದ್ರ ಜಾಗೃತ ಆಯೋಗದ ತ್ರಿಸದಸ್ಯ ಸಮಿತಿಯೆದುರು ಹಾಜರಾಗಿ ತನ್ನ ಹೇಳಿಕೆ ನೀಡಿದ್ದರಲ್ಲದೆ, ಅಸ್ತಾನಾ ತಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 12ರಂದು ಸಿವಿಸಿ ಸುಪ್ರೀಂಕೋರ್ಟ್‌ನಲ್ಲಿ ನೀಡಲಿರುವ ಹೇಳಿಕೆ ಮಹತ್ವ ಪಡೆದಿದೆ. ವರ್ಮ ವಿರುದ್ಧ ಸಿವಿಸಿ ನಡೆಸುವ ತನಿಖೆಗೆ ಮೇಲುಸ್ತುವಾರಿಗೆ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಎ.ಕೆ.ಪಟ್ನಾಯಕ್ ಅವರನ್ನು ನ್ಯಾಯಾಲಯ ನೇಮಿಸಿದೆ.

 ನವೆಂಬರ್ 12ರಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ. ಅಲ್ಲದೆ ಸಿಬಿಐಯ ಮಧ್ಯಂತರ ನಿರ್ದೇಶಕ ರಾಗಿ ನೇಮಕಗೊಂಡಿರುವ ಎಂ.ನಾಗೇಶ್ವರ್ ರಾವ್ ಅಕ್ಟೋಬರ್ 23ರಿಂದ ಕೈಗೊಂಡಿರುವ ನಿರ್ಧಾರಗಳನ್ನು ನ್ಯಾಯಾಲಯ ಗಮನಿಸಲಿದೆ.

  ನಾಗೇಶ್ವರ ರಾವ್ ಅಕ್ಟೋಬರ್ 23ರಿಂದ ಕೈಗೊಂಡಿರುವ ತನಿಖೆಯ ವರ್ಗಾವಣೆ, ತನಿಖಾಧಿಕಾರಿಗಳ ವರ್ಗಾವಣೆ ಇತ್ಯಾದಿ ನಿರ್ಧಾರಗಳ ಕುರಿತ ವಿವರಗಳನ್ನು ಸೀಲ್ ಮಾಡಲಾದ ಲಕೋಟೆಯಲ್ಲಿ ನ್ಯಾಯಾಲಯದ ಮುಂದಿಡಲಾಗುವುದು. ಈ ಕುರಿತು ನ್ಯಾಯಾಲಯ ಸೂಕ್ತ ಆದೇಶ ಹೊರಡಿಸಲಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News