ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಜಯಿಸಿದ ದ.ಆಫ್ರಿಕ

Update: 2018-11-11 18:24 GMT

ಹೊಬರ್ಟ್, ನ.11: ನಾಯಕ ಎಫ್‌ಡು ಪ್ಲೆಸಿಸ್(125) ಹಾಗೂ ದಾಂಡಿಗ ಡೇವಿಡ್ ಮಿಲ್ಲರ್(139) ನಾಲ್ಕನೇ ವಿಕೆಟ್‌ಗೆ ದಾಖಲಿಸಿದ 252 ರನ್ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ರವಿವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 40 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿ ಆಸ್ಟ್ರೇಲಿಯದ ಗೆಲುವಿಗೆ ಕಠಿಣ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿತು.

ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ ಆಸ್ಟ್ರೇಲಿಯ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕ್ರಿಸ್ ಲಿನ್(0) ವಿಕೆಟ್ ಉಡಾಯಿಸಿ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ಇನ್ನಿಬ್ಬರು ವೇಗಿಗಳಾದ ಕಾಗಿಸೊ ರಬಾಡ ಹಾಗೂ ಲುಂಗಿ ಗಿಡಿ ಆಸೀಸ್‌ನ ಆರಂಭಿಕ ಆಟಗಾರ ಆ್ಯರೊನ್ ಫಿಂಚ್(11) ಹಾಗೂ ಟ್ರೆವಿಸ್ ಹೆಡ್(6)ವಿಕೆಟ್ ಕಬಳಿಸಿದರು. ಆಗ ಆಸ್ಟ್ರೇಲಿಯದ ಸ್ಕೋರ್ 3ಕ್ಕೆ 39.

ಮಾರ್ಕಸ್ ಸ್ಟೋನಿಸ್(35) ಅವರೊಂದಿಗೆ 4ನೇ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿದ ಶಾನ್ ಮಾರ್ಷ್(106)ತಂಡಕ್ಕೆ ಆಸರೆಯಾದರು. 102 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ ಆರನೇ ಶತಕ ಸಿಡಿಸಿದ ಬೆನ್ನಿಗೇ ಮಾರ್ಷ್ ಔಟಾದರು. ಮಾರ್ಷ್ ನಿರ್ಗಮನ ದೊಂದಿಗೆ ಆಸ್ಟ್ರೇಲಿಯದ ಗೆಲುವಿನ ಆಸೆ ಕಮರಿಹೋಯಿತು.

ಅಲೆಕ್ಸ್ ಕಾರೆ(42) ವಿಕೆಟ್ ಪಡೆದ ಸ್ಟೇಯ್ನ್ (3-45) ಆಸ್ಟ್ರೇಲಿಯದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ 27 ಎಸೆತಗಳಲ್ಲಿ 3 ಬೌಂಡರಿ ಸಹಿತ 35 ರನ್ ಗಳಿಸಿದ್ದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ವಿಫಲರಾದರು. ಅಂತಿಮವಾಗಿ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಆರು ವಿಕೆಟ್‌ಗಳಿಂದ ಸೋತಿದ್ದ ಆಸ್ಟ್ರೇಲಿಯ ಅಡಿಲೇಡ್‌ನಲ್ಲಿ ಶುಕ್ರವಾರ ನಡೆದ 2ನೇ ಪಂದ್ಯವನ್ನು 7 ರನ್‌ನಿಂದ ರೋಚಕವಾಗಿ ಗೆದ್ದುಕೊಂಡು ತಿರುಗೇಟು ನೀಡಿತು. ಆದರೆ, ಮೂರನೇ ಏಕದಿನ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಹರಿಣ ಪಡೆ 2009ರ ಬಳಿಕ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಏಕದಿನ ಸರಣಿ ವಶಪಡಿಸಿಕೊಂಡಿತು.

ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ 55 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಸರೆಯಾದ ಡು ಪ್ಲೆಸಿಸ್ ಹಾಗೂ ಮಿಲ್ಲರ್ 4ನೇ ವಿಕೆಟ್‌ಗೆ 252 ರನ್ ಜೊತೆಯಾಟ ನಡೆಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕ ಆಟಗಾರರು 4ನೇ ವಿಕೆಟ್‌ಗೆ ಗಳಿಸಿದ ಗರಿಷ್ಠ ಮೊತ್ತದ ಜೊತೆಯಾಟವಾಗಿದೆ.

ಇದೇ ವೇಳೆ ಆಸ್ಟ್ರೇಲಿಯ ತಂಡ ಏಕದಿನ ಕ್ರಿಕೆಟ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಗರಿಷ್ಠ ರನ್ ಬಿಟ್ಟುಕೊಟ್ಟಿತು. 2003ರಲ್ಲಿ ನಡೆದ ಏಕದಿನದಲ್ಲಿ ಶ್ರೀಲಂಕಾದ ಮರ್ವನ್ ಅಟಪಟ್ಟು ಹಾಗೂ ಸನತ್ ಜಯಸೂರ್ಯ ಆಸ್ಟ್ರೇಲಿಯ ವಿರುದ್ಧ 237 ರನ್ ಜೊತೆಯಾಟ ನಡೆಸಿದ್ದರು. ಮಿಲ್ಲರ್ 41 ರನ್ ಗಳಿಸಿದ್ದಾಗ ಡಿಆರ್‌ಎಸ್ ನಿಯಮದ ಲಾಭ ಪಡೆದು ಎಲ್ಬಿಡಬ್ಲ್ಯು ಬಲೆಗೆ ಬೀಳುವ ಭೀತಿಯಿಂದ ಪಾರಾದರು. ಪ್ಲೆಸಿಸ್ 29 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು.

 ಜೀವದಾನ ಲಾಭ ಪಡೆದ ಮಿಲ್ಲರ್ ಹಾಗೂ ಪ್ಲೆಸಿಸ್ ಕೊನೆಯ 10 ಓವರ್‌ಗಳಲ್ಲಿ 130 ರನ್ ಸೂರೆಗೈದರು. ಕೊನೆಯ ಐದು ಓವರ್‌ಗಳಲ್ಲಿ 75 ರನ್ ಹರಿದುಬಂತು.

114 ಎಸೆತಗಳ ಇನಿಂಗ್ಸ್‌ನಲ್ಲಿ ಪ್ಲೆಸಿಸ್ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದರು. 10ನೇ ಶತಕ ಸಿಡಿಸಿದ ಪ್ಲೆಸಿಸ್ ಅವರು ಸ್ಟೋನಿಸ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಔಟಾದ ಮಿಲ್ಲರ್ 108 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 139 ರನ್ ಗಳಿಸಿದರು. ಮಿಲ್ಲರ್ ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವದ ಜೊತೆಗೆ ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News