ಫೆಡ್ ಕಪ್ ಫೈನಲ್: ಝೆಕ್ ತಂಡಕ್ಕೆ ಮುನ್ನಡೆ

Update: 2018-11-11 18:27 GMT

ಪರಾಗ್ವೆ, ನ.11: ವಿಶ್ವದ ನಂ.1 ಕಟೆರಿನಾ ಸಿನಿಯಾಕೊವಾ ಹಾಗೂ ಹಿರಿಯ ಆಟಗಾರ್ತಿ ಬಾರ್ಬೊರ ಸ್ಟ್ರೈಕೊವಾ ಝೆಕ್ ಗಣರಾಜ್ಯ ಟೆನಿಸ್ ತಂಡ ಮತ್ತೊಂದು ಫೆಡ್‌ಕಪ್ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಝೆಕ್ ತಂಡ ಹಾಲಿ ಚಾಂಪಿಯನ್ ಅಮೆರಿಕ ವಿರುದ್ಧ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ 2011ರ ಬಳಿಕ ಆರು ಫೆಡ್‌ಕಪ್ ಪ್ರಶಸ್ತಿ ಜಯಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಸಿನಿಯಾಕೊವಾ ಅವರು ಅಲಿಸನ್ ರಿಸ್ಕೆ ವಿರುದ್ಧ 6-3, 7-6(2) ಅಂತರದಿಂದ ಜಯ ಸಾಧಿಸಿ ಝೆಕ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು.

ಹಿರಿಯ ಆಟಗಾರ್ತಿ ಬರ್ಬೊರ ಸ್ಟ್ರೈಕೋವಾ ಮತ್ತೊಂದು ಪಂದ್ಯದಲ್ಲಿ ಸೋಫಿಯಾ ಕೆನಿನ್‌ರನ್ನು 6-7(5), 6-1, 6-4 ಅಂತರದಿಂದ ಸೋಲಿಸಿದ್ದಾರೆ.

ಕಳೆದ 7 ಫೆಡ್ ಕಪ್ ಟೂರ್ನಿಗಳಲ್ಲಿ 5 ಬಾರಿ ಪ್ರಶಸ್ತಿ ಜಯಿಸಿರುವ ಝೆಕ್ 2009ರಿಂದ ಸ್ವದೇಶದಲ್ಲಿ ಆಡಿರುವ 10 ಪಂದ್ಯಗಳಲ್ಲಿ ಸೋಲದೇ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

 32ರ ಹರೆಯದ ಸ್ಟ್ರೈಕೊವಾ 16ನೇ ಬಾರಿ ಫೆಡ್ ಕಪ್‌ನಲ್ಲಿ ಆಡುತ್ತಿದ್ದು ಇದು ಅವರ ಕೊನೆಯ ಟೂರ್ನಿಯಾಗಿದೆ. ಟೂರ್ನಮೆಂಟ್ ಇತಿಹಾಸದಲ್ಲಿ ಎರಡು ಯಶಸ್ವಿ ತಂಡ ಎನಿಸಿಕೊಂಡಿರುವ ಝೆಕ್ ಹಾಗೂ ಅಮೆರಿಕ ತಂಡ ಸ್ಟಾರ್ ಆಟಗಾರರಿಲ್ಲದೆ ಹೋರಾಟಕ್ಕೆ ಇಳಿದಿವೆ.

ಅಮೆರಿಕ ತಂಡದಲ್ಲಿ ವಿಲಿಯಮ್ಸ್ ಸಹೋದರಿಯರಾದ ಸೆರೆನಾ ಹಾಗೂ ವೀನಸ್, ಮ್ಯಾಡಿಸನ್ ಕೀಸ್ ಹಾಗೂ ಸ್ಲೋಯಾನ್ ಸ್ಟೀಫನ್ಸ್ ಅಲಭ್ಯರಾಗಿದ್ದಾರೆ. ವಿಶ್ವದ ನಂ.8ನೇ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಗಾಯದ ಸಮಸ್ಯೆಯಿಂದ ಝೆಕ್ ತಂಡದ ಪರ ಟೂರ್ನಿಯಲ್ಲಿ ಆಡುತ್ತಿಲ್ಲ. ಅನಾರೋಗ್ಯ ಹಿನ್ನೆಲೆಯಲ್ಲಿ ಪೆಟ್ರಾ ಕ್ವಿಟೋವಾ ಮೊದಲ ದಿನದ ಆಟದಿಂದ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News