ಛತ್ತೀಸ್‌ಗಢ: ಬಿಗಿ ಭದ್ರತೆಯಲ್ಲಿ ಮೊದಲ ಹಂತದ ಮತದಾನ ಆರಂಭ

Update: 2018-11-12 04:59 GMT

ರಾಯ್‌ಪುರ, ನ.12: ಛತ್ತೀಸ್‌ಗಢ ರಾಜ್ಯದ ಮಾವೋವಾದಿಗಳ ಪ್ರಾಬಲ್ಯದ 8 ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಮೊದಲ ಹಂತದ ಮತದಾನ ಇಂದು ಬೆಳಗ್ಗೆ ಆರಂಭವಾಗಿದೆ.

ರಾಜ್ಯದ ಉಳಿದ 72 ವಿಧಾನಸಭಾ ಕ್ಷೇತ್ರಗಳಿಗೆ ನ.20 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಛತ್ತೀಸ್‌ಗಢದಲ್ಲಿ ಚುನಾವಣೆ ಸುಗಮವಾಗಿ ಸಾಗಲು ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ 12 ಹೆಲಿಕಾಪ್ಟರ್‌ಗಳು ಹಾರಾಡಲಿವೆ.

ರಮಣ್‌ಸಿಂಗ್ ಸರಕಾರ ಸತತ ಮೂರು ಅವಧಿಯಲ್ಲಿ ಅಧಿಕಾರ ನಡೆಸುತ್ತಿದ್ದು ಇದೀಗ ನಾಲ್ಕನೇ ಬಾರಿ ಜನಾದೇಶದ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ ಪಕ್ಷ ಆಡಳಿತವಿರೋಧಿ ಅಲೆಯ ಲಾಭ ಪಡೆಯುವ ವಿಶ್ವಾಸದಲ್ಲಿದೆ. ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಹೊಸ ಪಕ್ಷ ಸ್ಥಾಪನೆಯೊಂದಿಗೆ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ವಿಫಲವಾಗಿರುವ ಕಾರಣ ಪಕ್ಷದ ಅವಕಾಶವನ್ನು ಕ್ಷೀಣಿಸಿದೆ.

ಇಂದು ನಡೆಯಲಿರುವ 18 ಕ್ಷೇತ್ರಗಳ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಉಳಿದ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ. ಮಾವೋವಾದಿಗಳ ನಿರಂತರ ದಾಳಿಯ ನಡುವೆ ಚುನಾವಣೆ ನಡೆಯುತ್ತಿದ್ದು, ಮಾವೋವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News