ಅನಂತ್ ಕುಮಾರ್ : ಅಧಿಕಾರದಲ್ಲಿರುವಾಗಲೇ ನಿಧನರಾದ ಮೋದಿ ಸಂಪುಟದ ಮೂರನೇ ಸಚಿವ

Update: 2018-11-12 05:20 GMT

ಬೆಂಗಳೂರು,ನ.12 : ಕೇಂದ್ರ ಸಂಸದೀಯ ವ್ಯವಹಾರಗಳು ಹಾಗು ರಸಗೊಬ್ಬರ ಖಾತೆ ಸಚಿವ, ಹಿರಿಯ ಬಿಜೆಪಿ ನಾಯಕ ಅನಂತ್ ಕುಮಾರ್ ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇದ್ದರು ಎಂದು ಹೇಳಲಾಗಿದೆ. ಅನಂತ್ ಕುಮಾರ್ ನಿಧನದೊಂದಿಗೆ ಬಿಜೆಪಿ ಮತ್ತು ಸಂಘಪರಿವಾರದ ಅತ್ಯಂತ ಪ್ರಮುಖ ಮುಖಂಡರೊಬ್ಬರ ನಿರ್ಗಮನವಾಗಿದೆ.  ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಮತ್ತೊಬ್ಬ ಪ್ರಮುಖ ಸಚಿವ ಹಠಾತ್ತನೆ ಇಹಲೋಕ ತ್ಯಜಿಸಿದಂತಾಗಿದೆ. 

2014ರ ಮೇ  26 ರಂದು  ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿಯ ಇನ್ನೋರ್ವ ಹಿರಿಯ ನಾಯಕ, ಗೋಪೀನಾಥ ಮುಂಡೆ ಅವರು ಕೇಂದ್ರ ಕೃಷಿ ಸಚಿವರಾದ ಒಂದೇ ವಾರದೊಳಗೆ ದೆಹಲಿಯಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟರು. ಅದು ಅಧಿಕಾರಕ್ಕೆ ಬಂದ ಬೆನ್ನಿಗೇ ಬಿಜೆಪಿ ಹಾಗು ಮೋದಿ ಪಾಲಿಗೆ ಬಹುದೊಡ್ಡ ನಷ್ಟವೆಂದೇ ಪರಿಗಣಿಸಲಾಗಿತ್ತು. ಏಕೆಂದರೆ ಆಗ ಕೆಲವೇ ಸಮಯದಲ್ಲಿ ನಡೆಯಲಿದ್ದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಗೋಪಿನಾಥ್ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದರು. 

                    (ಗೋಪೀನಾಥ ಮುಂಡೆ)

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಧವೆ ಅವರು ಮೇ 18, 2017 ರಂದು ದೆಹಲಿಯ ಏಮ್ಸ್ ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಆ ವರ್ಷದ ಜನವರಿಯಿಂದಲೇ ಅನಾರೋಗ್ಯಕ್ಕೊಳಗಾಗಿ ಕಚೇರಿಗೆ ನಿಯಮಿತವಾಗಿ ಬರುತ್ತಿರಲಿಲ್ಲ. 

                 (ಅನಿಲ್ ಮಾಧವ್ ಧವೆ)

ತೀವ್ರ ಅನಾರೋಗ್ಯಕ್ಕೊಳಗಾದ  ಹಿರಿಯ ಸಚಿವರು 

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡ್ನಿ ಅನಾರೋಗ್ಯಕ್ಕೊಳಗಾಗಿ ಸುದೀರ್ಘ ಕಾಲ ಕರ್ತವ್ಯದಿಂದ ದೂರ ಇದ್ದರು. ಈ ಸಂದರ್ಭದಲ್ಲಿ ಪಿಯೂಷ್ ಗೋಯಲ್ ಅವರಿಗೆ ವಿತ್ತ ಖಾತೆಯ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿತ್ತು. ದೆಹಲಿಯ ಏಮ್ಸ್ ನಲ್ಲಿ ಕಿಡ್ನಿ ಕಸಿಗೊಳಗಾಗಿ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆದು ಈಗ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ . ಆದರೆ ಈಗಲೂ ವೈದ್ಯರ ಸೂಚನೆ ಮೇರೆಗೆ ತೀವ್ರ ಎಚ್ಚರಿಕೆಯಿಂದ ದಿನನಿತ್ಯದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಸೋಂಕು ಹರಡುವ ಭೀತಿ ಇರುವುದರಿಂದ ಆದಷ್ಟು ಜನರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡಿದ್ದಾರೆ. 

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕೂಡ ಅಧಿಕಾರದ್ಲಲಿರುವಾಗಲೇ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದರು. ಅವರಿಗೂ ಕಿಡ್ನಿ ಸಮಸ್ಯೆಯಾಗಿ ಬಳಿಕ ಕಿಡ್ನಿ ಕಸಿ ಮಾಡಿಸಿಕೊಂಡು ಇದೀಗ ಚೇತರಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. 

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮನವೊಲಿಸಿ 2014 ರ ನವೆಂಬರ್ ನಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿ ನೇಮಿಸಿದರು. ಸಿಎಂ ಹುದ್ದೆಯನ್ನು ಒಲ್ಲದ ಮನಸ್ಸಿನಿಂದಲೇ ಬಿಟ್ಟು ಬಂದ ಪರಿಕ್ಕರ್ ಕೇಂದ್ರದ ಮಹತ್ವದ ಹುದ್ದೆಯನ್ನು ವಹಿಸಿಕೊಂಡರು. ಆದರೆ 2017 ರ ಮಾರ್ಚ್ ನಲ್ಲಿ ಗೋವಾದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಎರಡನೇ ಸ್ಥಾನಕ್ಕಿಳಿದ ಮೇಲೆ ನಡೆದ ರಾಜಕೀಯ ಸರ್ಕಸ್ ನಲ್ಲಿ ಮತ್ತೆ ದೆಹಲಿಯಿಂದ ಹಿಂದುರಿಗಿದ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾದರು. ಆದರೆ ವಿಧಿಯಾಟ ಬೇರೆಯೇ ಇತ್ತು.

ಮುಖ್ಯಮಂತ್ರಿಯಾದ ಕೆಲವೇ ಸಮಯದಲ್ಲಿ ಪರಿಕ್ಕರ್ ಅನಾರೋಗ್ಯಕ್ಕೆ ತುತ್ತಾದರು. ಬಳಿಕ ಅವರಿಗೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಇದೆ ಎಂದು ಖಚಿತವಾಯಿತು. ವಿದೇಶದಲ್ಲಿ ಸುದೀರ್ಘ ಕಾಲ ಚಿಕಿತ್ಸೆ ಪಡೆದ ಮರಳಿದ ಪರಿಕ್ಕರ್ ದೆಹಲಿಯ ಏಮ್ಸ್ ನಲ್ಲೂ ಚಿಕಿತ್ಸೆ ಪಡೆದರು. ಇದೀಗ ಅವರು ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಅವರ ಚಿತ್ರವೊಂದು ಎಲ್ಲರ ತೀವ್ರ ಚಿಂತೆಗೆ ಕಾರಣವಾಗಿತ್ತು. ಪಕ್ಷಭೇದ ಮರೆತು ಎಲ್ಲರೂ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಈ ನಡುವೆ ಗೋವಾದಲ್ಲಿ ಸಿಎಂ ಅನಾರೋಗ್ಯದಿಂದಾಗಿ ಆಡಳಿತ ಸಂಪೂರ್ಣ ಕುಸಿದಿದೆ ಎಂಬ ಆರೋಪ ಗಂಭೀರವಾಗಿ ಕೇಳಿ ಬಂದಿದೆ. ಆದರೆ ಪರಿಕ್ಕರ್ ಬದಲಿಗೆ ಮೈತ್ರಿ ಪಕ್ಷಗಳು ಒಪ್ಪುವ ಸೂಕ್ತ ನಾಯಕ ಯಾರು ಎಂದು ನಿರ್ಧರಿಸಲು ಬಿಜೆಪಿಗೆ ಸಾಧ್ಯವಾಗದೆ ಇರುವುದರಿಂದ ತೀವ್ರ ಅನಾರೋಗ್ಯದಲ್ಲಿದ್ದರೂ ಪರಿಕ್ಕರ್ ಇನ್ನೂ ಸಿಎಂ ಆಗಿ ಮುಂದುವರಿದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News