ಕೇರಳದ ಮೊದಲ ‘ಬ್ಲೇಡ್’ ರನ್ನರ್ ಸಾಜೇಶ್ ಕೃಷ್ಣನ್

Update: 2018-11-12 12:27 GMT

ತಿರುವನಂತಪುರ, ನ.12: ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ, ಅದನ್ನೇ ಜೀವನವನ್ನಾಗಿ ರೂಪಾಂತರಗೊಳಿಸುವ ವ್ಯಕ್ತಿಗೆ ಸಾಜೇಶ್ ಕೃಷ್ಣನ್ ಸೂಕ್ತ ನಿದರ್ಶನ. ಕಣ್ಣೂರಿನ ಪಯ್ಯನೂರು ಮೂಲದ ಸಾಜೇಶ್ ತನ್ನ 18ನೇ ವಯಸ್ಸಿನಲ್ಲಿ ರಸ್ತೆ ಅಪಘಾತವೊಂದರಲ್ಲಿ ಎಡಗಾಲನ್ನು ಕಳೆದುಕೊಂಡರು. ಕಾಲು ಕಳೆದುಕೊಂಡರೂ ವಿಶ್ವಾಸ ಕಳೆದುಕೊಳ್ಳದ ಸಾಜೇಶ್ ಎಲ್ಲ ಅಡೆ-ತಡೆಗಳನ್ನು ದಾಟಿ ಕೇರಳದ ಮೊದಲ ‘ಬ್ಲೇಡ್’ ರನ್ನರ್ ಎನಿಸಿಕೊಂಡಿದ್ದಾರೆ.

ದುರಂತ ಸಂಭವಿಸಿದ ಬಳಿಕ ವೈದ್ಯರು ಕಾಲನ್ನು ತೆಗೆಯಬೇಕೆಂದು ಸಾಜೇಶ್‌ಗೆ ಸಲಹೆ ನೀಡಿದ್ದರು. ಕಾಲು ಕಳೆದುಕೊಂಡರೆ ಊರುಗೋಲು ನೆರವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಸಾಜೇಶ್‌ಗೆ ಗೊತ್ತಿತ್ತು. ಹೀಗಾಗಿ ಅವರು ವೈದ್ಯರ ಬಳಿ ಕಾಲಿಲ್ಲದಿದ್ದರೆ ಏನು ಮಾಡಬೇಕೆಂದು ಕೇಳಿದರು. ಮೊಣಕಾಲಿಗಿಂತ ಕೆಳಗೆ ಕಾಲನ್ನು ಕತ್ತರಿಸಿದರೆ ಕೃತಕ ಕಾಲು ಅಳವಡಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದರು. ಸಾಜೇಶ್ ಕೃತಕ ಕಾಲಿನ ಮೊರೆ ಹೋದರು.

ಸ್ವತಹ ಬ್ಲೇಡ್ ರನ್ನಸ್ ಆಗಿರುವ ಮಾಜಿ ಸೈನಿಕ ಮೇಜರ್ ಡಿಪಿ ಸಿಂಗ್ ಸಾಜೇಶ್‌ರ ಮನೋಭಾವವನ್ನು ಸಂಪೂರ್ಣ ಬದಲಿಸಿದರು. ಸಿಂಗ್ ನಡೆಸುತ್ತಿದ್ದ ‘ಚಾಲೆಂಜಿಂಗ್ ಒನ್ಸ್’ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಸಾಜೇಶ್‌ರಂತಹ ವ್ಯಕ್ತಿಗಳು ತಾವೆದುರಿಸಿದ್ದ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು.

ಬ್ಲೇಡ್ ರನ್ನರ್‌ಗಳ ಹಲವಾರು ವೀಡಿಯೊಗಳು ಸಾಜೇಶ್ ಮೇಲೆ ಪರಿಣಾಮಬೀರಿದವು. 2017ರಲ್ಲಿ ವಾಸ್‌ಕ್ಯುಲರ್ ಸೊಸೈಟ್ ಆಫ್ ಇಂಡಿಯಾ ಮ್ಯಾರಥಾನ್‌ನಲ್ಲಿ ಭಾಗವಹಿಸುವಂತೆ ಸಾಜೇಶ್‌ಗೆ ಆಹ್ವಾನ ನೀಡಿತ್ತು. ಈ ಸಂಸ್ಥೆಯು ಸಾಜೇಶ್‌ಗೆ ಸುಮಾರು 6 ಲಕ್ಷ ರೂ. ವೌಲ್ಯದ ಓಟಕ್ಕೆ ಸೂಕ್ತವಾಗಿರುವ ಬ್ಲೇಡ್‌ನ್ನು ಉಡುಗೊರೆಯಾಗಿ ನೀಡಿತ್ತು.

ಕೊಚ್ಚಿಯಲ್ಲಿ ಮೊದಲ ಬಾರಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಸಾಜೇಶ್ ಕೃತಕ ಕಾಲಿನಲ್ಲಿ 5 ಕಿ.ಮೀ. ದೂರವನ್ನು 48 ನಿಮಿಷಗಳಲ್ಲಿ ಓಡಿದ್ದರು.

ಆ ನಂತರ ಸಾಜೇಶ್ ಹಿಂತಿರುಗಿ ನೋಡಿಲ್ಲ. ಹಲವು ರಾಜ್ಯ ಮಟ್ಟದ ದಾಖಲೆಗಳನ್ನು ಮುರಿದಿದ್ದರು. ಇಂಜಿನಿಯರ್ ಪದವೀಧರರಾಗಿರುವ ಸಾಜೇಶ್ ಇದೀಗ ಸರಕಾರಿ ಸ್ವಾಮ್ಯದ ಕೈಗಾರಿಕ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

‘‘ವಾಸ್ತವಾಂಶವನ್ನು ಒಪ್ಪಿಕೊಂಡಿರುವುದು ನನಗೆ ತುಂಬಾ ನೆರವಾಯಿತು. ಹತಾಶರಾಗಿ ನಮ್ಮನ್ನು ಹೀಯಾಳಿಸಿಕೊಳ್ಳುವುದು ತುಂಬಾ ಸುಲಭ. ನನ್ನ ಜೀವನದಲ್ಲಿ ಏನಾಗಿದೆಯೋ ಅದನ್ನು ಸ್ವೀಕರಿಸಿದ್ದೇನೆ. ನಾನು ಬದುಕಬೇಕೆಂದು ಬಯಸಿದ್ದೆ. ಸಕಾರಾತ್ಮಕ ವಿಷಯಗಳತ್ತ ಗಮನ ನೀಡಿದ್ದು ನನಗೆ ಸಾಕಷ್ಟು ನೆರವಾಯಿತು’’ ಎಂದು ಸಾಜೇಶ್ ಹೇಳಿದ್ದಾರೆ.

ಸಾಜೇಶ್ ಓರ್ವ ನೈಜ ಕ್ರೀಡಾಭಿಮಾನಿ ಹಾಗೂ ಕ್ರೀಡಾಪಟು. ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಹೊಂದಿರುವ ಸಾಜೇಶ್ ಡಿ.1 ರಿಂದ 5ರ ತನಕ ಇಂಡೋನೇಶ್ಯಾದಲ್ಲಿ ನಡೆಯುವ ಏಶ್ಯ ಅಂಪುಟಿ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಭಾರತದ ಪ್ಯಾರಾ ಫುಟ್ಬಾಲ್ ಸಂಸ್ಥೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಈಗಾಗಲೇ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News