ಇಂದಿನಿಂದ ಹಾಂಕಾಂಗ್ ಓಪನ್: ಸಿಂಧುಗೆ ಪ್ರಶಸ್ತಿ ಗೆಲ್ಲುವ ಕನಸು

Update: 2018-11-12 18:39 GMT

ಕಾವ್ಲಾನ್, ನ.12: ಹಾಂಕಾಂಗ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಮೆಂಟ್ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತದ ಪಿ.ವಿ. ಸಿಂಧು ಪ್ರಶಸ್ತಿ ಗೆಲ್ಲುವ ಪ್ರಯತ್ನ ನಡೆಸಲಿದ್ದಾರೆ.

ಸಿಂಧು ಕಳೆದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಸಿಂಧು ವಿಶ್ವದ ನಂ.1 ಮಹಿಳಾ ತಾರೆ ತೈ ಝೂ ಯಿಂಗ್ ವಿರುದ್ಧ ಫೈನಲ್‌ನಲ್ಲಿ ಸೋತು ಪ್ರಶಸ್ತಿ ಗೆಲ್ಲುವಲ್ಲಿ ಎಡವಿದ್ದರು.

ಈ ಬಾರಿ ಮತ್ತೆ ಸಿಂಧು ಅವರಿಗೆ ಸವಾಲು ಎದುರಾಗಿದೆ.

 2018ನೇ ವರ್ಷದಲ್ಲಿ ಸಿಂಧು ಕಾಮನ್‌ವೆಲ್ತ್ ಗೇಮ್ಸ್, ವರ್ಲ್ಡ್ ಚಾಂಪಿಯನ್‌ಶಿಪ್ ಮತ್ತು ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಇಂಡಿಯಾ ಓಪನ್ ಮತ್ತು ಥಾಯ್ಲೆಂಡ್ ಓಪನ್‌ನಲ್ಲಿ ಫೈನಲ್ ತಲುಪಿದ್ದರು.

ಸಿಂಧು ಅವರು ಹಾಂಕಾಂಗ್ ಓಪನ್‌ನಲ್ಲಿ ಈ ಬಾರಿ ಥಾಯ್ಲೆಂಡ್‌ನ ನಿಚಾವೊನ್ ಜಿಂದಾಪೊಲ್‌ರನ್ನು ಎದುರಿಸುವರು. ಕ್ವಾರ್ಟರ್ ಫೈನಲ್‌ನಲ್ಲಿ ಚೈನಾದ ಹಿ ಬಿಂಗ್‌ಜಿಯಾವೊ ಸವಾಲು ಎದುರಾಗುವ ನಿರೀಕ್ಷೆ ಇದೆ. ಬಿಂಗ್‌ಜಿಯಾವೊ ವಿರುದ್ಧ ಸಿಂಧು ಈ ವರ್ಷ ಮೂರು ಬಾರಿ ಸೋಲು ಅನುಭವಿಸಿದ್ದರು.

ಸೈನಾ ನೆಹ್ವಾಲ್ ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. ಸೈನಾಗೆ ಮೊದಲ ಪಂದ್ಯದಲ್ಲಿ ಜಪಾನ್‌ನ ಎರಡನೇ ಶ್ರೇಯಾಂಕಿತೆ ಅಕಾನೆ ಯಮಗುಚಿ ಸವಾಲು ಎದುರಾಗಲಿದೆ. ಒಡಿನ್ಸಾದಲ್ಲಿ ಎರಡನೇ ಸುತ್ತಿನಲ್ಲಿ ಸೈನಾ ಜಪಾನ್‌ನ ಆಟಗಾರ್ತಿಯನ್ನು ಸೋಲಿಸಿದ್ದರು.

 ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಶ್ರೀಕಾಂತ್‌ಗೆಹಾಂಕಾಂಗ್‌ನ ವಾಂಗ್ ವಿಂಗ್ ಕಿ ಮತ್ತು ಎಚ್.ಎಸ್. ಪ್ರಣಯ್‌ಗೆ ಜಪಾನ್‌ನ ಆ್ಯಂಡ್ರೆಸ್ ಆ್ಯಂಟೊನ್ಸೆನ್ ಸವಾಲು ಎದುರಾಗಲಿದೆ. ಶ್ರೀಕಾಂತ್ ಮತ್ತು ಪ್ರಣಯ್ ಮೊದಲ ಸುತ್ತಿನಲ್ಲಿ ತೇರ್ಗಡೆಯಾದರೆ ಎರಡನೇ ಸುತ್ತಿನಲ್ಲಿ ಎದುರಾಳಿಯಾಗುವ ಸಾಧ್ಯತೆ ಇದೆ. ಸಮೀರ್ ವರ್ಮಾಗೆ ಪ್ರಥಮ ಸುತ್ತಿನಲ್ಲಿ ಥಾಯ್ಲೆಂಡ್‌ನ ಸುಪ್ರಿಯಾನೊ ಅವಿಂಗ್‌ಸಾನೊನ್‌ರನ್ನು ಮತ್ತು ಬಿ ಸಾಯ್ ಪ್ರಣೀತ್ ಅವರಿಗೆ ಥಾಯ್ಲೆಂಡ್‌ನ ಖೊಸಿಟ್ ಫೇಟ್‌ಪ್ರದಾಬ್ ಸವಾಲು ಎದುರಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News