ಎರಡನೇ ಟೆಸ್ಟ್: ಮುಶ್ಫಿಕುರ್ರಹೀಂ ದಾಖಲೆಯ ದ್ವಿಶತಕ

Update: 2018-11-12 18:45 GMT

ಢಾಕಾ, ನ.12: ಟೆಸ್ಟ್‌ನಲ್ಲಿ ಎರಡು ಬಾರಿ ದ್ವಿಶತಕ ಸಿಡಿಸಿದ ಮೊದಲ ವಿಕೆಟ್‌ಕೀಪರ್ ಎಂಬ ದಾಖಲೆ ನಿರ್ಮಿಸಿದ ಮುಶ್ಫಿಕುರ್ರಹೀಂ ಸಾಹಸದ ನೆರವಿನಿಂದ ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.

ಮುಶ್ಫಿಕುರ್ರಹೀಂ ಔಟಾಗದೆ 219 ರನ್ ಗಳಿಸುವ ಮೂಲಕ ಬಾಂಗ್ಲಾ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ522 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ನೆರವಾದರು. ಬಾಂಗ್ಲಾದ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರಿಸ ಹೊರಟಿರುವ ಝಿಂಬಾಬ್ವೆ 2ನೇ ದಿನದಾಟದಂತ್ಯಕ್ಕೆ 1 ವಿಕೆಟ್‌ಗೆ 25 ರನ್ ಗಳಿಸಿದೆ.

ತೈಜುಲ್ ಇಸ್ಲಾಮ್ ಅವರು ಹ್ಯಾಮಿಲ್ಟನ್ ಮಸಕಝ(14) ವಿಕೆಟ್ ಕಬಳಿಸಿದ್ದಾರೆ. ಬ್ರಿಯಾನ್ ಚಾರಿ(10) ಹಾಗೂ ನೈಟ್ ವಾಚ್‌ಮ್ಯಾನ್ ಡೊನಾಲ್ಡ್ ಟಿರಿಪಾನೊ(0)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಝಿಂಬಾಬ್ವೆ ಮೊದಲ ಪಂದ್ಯವನ್ನು ಜಯಿಸಿ ಸರಣಿಯಲ್ಲಿ 1-0 ಮುನ್ನಡೆಯಲ್ಲಿದ್ದು 7 ವರ್ಷಗಳ ಬಳಿಕ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದುಕೊಳ್ಳಲು ಕನಿಷ್ಠ ಡ್ರಾ ಮಾಡಿಕೊಳ್ಳುವ ಅಗತ್ಯವಿದೆ.

ಇದಕ್ಕೆ ಮೊದಲು ಬಾಂಗ್ಲಾ 5 ವಿಕೆಟ್ ನಷ್ಟಕ್ಕೆ 303 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಮುಶ್ಫಿಕುರ್ರಹೀಂ ಲೆಗ್ ಸ್ಪಿನ್ನರ್ ಬ್ರೆಂಡನ್ ಮವುಟಾ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಬಾರಿ ದ್ವಿಶತಕ ಸಿಡಿಸಿದ ಮೊದಲ ವಿಕೆಟ್‌ಕೀಪರ್ ಎಂಬ ಕೀರ್ತಿಗೆ ಭಾಜನರಾದರು.

421 ಎಸೆತಗಳನ್ನು ಎದುರಿಸಿದ್ದ ಮುಶ್ಫಿಕುರ್ರಹೀಂ 18 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು. ಅಜೇಯ 219 ರನ್ ಗಳಿಸಿದ ರಹೀಂ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ್ದ ಸಹ ಆಟಗಾರ ಶಾಕಿಬ್ ಅಲ್ ಹಸನ್ ದಾಖಲೆಯನ್ನು ಮುರಿದರು. ರಹೀಂ ಅವರು ಶಾಕಿಬ್ ಅವರ ಗರಿಷ್ಠ ವೈಯಕ್ತಿಕ ರನ್ ದಾಖಲೆ(217)ಮುರಿದ ಬೆನ್ನಿಗೆ ನಾಯಕ ಮಹ್ಮೂದುಲ್ಲಾ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಶಾಕಿಬ್ 2017ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಕಿವೀಸ್ ವಿರುದ್ಧ 217 ರನ್ ಗಳಿಸಿದ್ದರು.

ರಹೀಮ್ 8ನೇ ವಿಕೆಟ್‌ಗೆ ಮೆಹಿದಿ ಹಸನ್‌ರೊಂದಿಗೆ 144 ರನ್ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದರು. ಇಂದು ಎರಡು ವಿಕೆಟ್ ಪಡೆದ ಕೈಲ್ ಜಾರ್ವಿಸ್ ಟೆಸ್ಟ್ ನಲ್ಲಿ 3ನೇ ಬಾರಿ 5 ವಿಕೆಟ್ ಗೊಂಚಲು (5-71)ಪಡೆದರು.

ಮೊದಲ ದಿನದಾಟದಲ್ಲಿ ಜಾರ್ವಿಸ್ 3 ವಿಕೆಟ್ ಪಡೆದಿದ್ದರು. ಇಂದು ಮಹ್ಮೂದುಲ್ಲಾ(36) ಹಾಗೂ ಅರಿಫುಲ್ ಹಕ್(4) ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News