ಇಂದಿನಿಂದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆರಂಭ

Update: 2018-11-14 18:33 GMT

ಹೊಸದಿಲ್ಲಿ, ನ.14: ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯದಿಂದ ವಿದೇಶಿ ಬಾಕ್ಸರ್‌ಗಳು ಸಮಸ್ಯೆ ಎದುರಿಸುತ್ತಿರುವ ನಡುವೆ ಗುರುವಾರದಿಂದ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಆರಂಭವಾಗಲಿದೆ. ಭಾರತದ ಹಿರಿಯ ಬಾಕ್ಸರ್ ಎಂಸಿ ಮೇರಿ ಕೋಮ್ ಆರನೇ ಬಾರಿ ಪ್ರಶಸ್ತಿ ಜಯಿಸುವ ಮೂಲಕ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದಾರೆ.

10ನೇ ಆವೃತ್ತಿಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 72 ದೇಶಗಳ 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

ಭಾರತ ಎರಡನೇ ಬಾರಿ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿಕೊಂಡಿದೆ. 2006ರಲ್ಲಿ ಮೊದಲ ಬಾರಿ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿದ್ದ ಭಾರತ ಒಟ್ಟು 8 ಪದಕಗಳನ್ನು(4ಚಿನ್ನ, 1 ಬೆಳ್ಳಿ, 3 ಕಂಚು)ಜಯಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು. ಅನುಭವಿ ಹಾಗೂ ಯುವ ಬಾಕ್ಸರ್‌ಗಳನ್ನು ಒಳಗೊಂಡ 10 ಸದಸ್ಯೆಯರುಗಳ ಭಾರತೀಯ ತಂಡ 2006ರ ಸಾಧನೆ ಪುನರಾವರ್ತಿಸುವ ಸಾಧ್ಯತೆಯಿಲ್ಲ. ಆದರೆ, ಚಿನ್ನ ಸಹಿತ ಕನಿಷ್ಠ ಮೂರು ಪದಕಗಳನ್ನು ಜಯಿಸುವ ನಿರೀಕ್ಷೆಯಿದೆ.

ಭಾರತಕ್ಕೆ ಭಾರೀ ಭರವಸೆ ಮೂಡಿಸಿರುವ 35ರ ಹರೆಯದ ಮೇರಿಕೋಮ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈತನಕ 5 ಚಿನ್ನದ ಪದಕ ಜಯಿಸುವ ಮೂಲಕ ಐರ್ಲೆಂಡ್‌ನ ಕಾಟಿ ಟೇಲರ್(5)ಅವರೊಂದಿಗೆ ಗೌರವ ಹಂಚಿಕೊಂಡಿದ್ದಾರೆ. ಮೇರಿಕೋಮ್ ಇನ್ನೊಂದು ಪದಕ ಜಯಿಸಿದರೆ ಬಾಕ್ಸಿಂಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್ ಎನಿಸಿಕೊಳ್ಳುತ್ತಾರೆ. ‘ಮ್ಯಾಗ್ನಿಫಿಸೆಂಟ್ ಮೇರಿ’ಖ್ಯಾತಿಯ ಮೇರಿಕೋಮ್ ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ತವರು ಪ್ರೇಕ್ಷಕರ ಸಮ್ಮುಖದಲ್ಲಿ ಎರಡನೇ ಬಾರಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಮೇರಿಕೋಮ್‌ಗೆ ಈ ವರ್ಷ ಯಶಸ್ವಿ ವರ್ಷವಾಗಿ ಪರಿಣಮಿಸಿದೆ. ಕಾಮನ್‌ವೆಲ್ತ್ ಗೇಮ್ಸ್, ಮೊದಲ ಆವೃತ್ತಿಯ ಇಂಡಿಯಾ ಓಪನ್ ಹಾಗೂ ಪೊಲೆಂಡ್‌ನಲ್ಲಿ ನಡೆದ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ಗಳಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. 2012ರ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಮೇರಿಕೋಮ್‌ಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸುವುದು ಅಷ್ಟೊಂದು ಸುಲಭವಲ್ಲ ಎಂಬ ವಿಚಾರ ಗೊತ್ತಿದೆ.

‘‘2001ರಿಂದ 48 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಬಾಕ್ಸರ್‌ಗಳು ಇಲ್ಲಿದ್ದಾರೆ. ಅವರನ್ನ್ನು ನಾನು ಚೆನ್ನಾಗಿ ಬಲ್ಲೆ. ಯುವ ಬಾಕ್ಸರ್‌ಗಳ ವಿರುದ್ದ ಹೋರಾಡುವುದು ತುಂಬಾ ಕಷ್ಟ. ಅವರು ವೇಗವಾಗಿ ಆಡುತ್ತಾರೆ. ನಾನು ನನ್ನ ಅನುಭವವನ್ನು ಬಳಸಿಕೊಳ್ಳುವೆ. ಹಿರಿಯ ಬಾಕ್ಸರ್‌ಗಳು ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತಾರೆ. ಅವರ ಬಗ್ಗೆ ನನಗೆ ಗೊತ್ತಿದೆ’’ ಎಂದು ಮೇರಿಕೋಮ್ ಹೇಳಿದ್ದಾರೆ.

 ಮೇರಿಕೋಮ್ ರಾಜ್ಯವಾದ ಮಣಿಪುರದ ಇನ್ನೋರ್ವ ಬಾಕ್ಸರ್ ಎಲ್.ಸರಿತಾದೇವಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 60 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲಿರುವ ಸರಿತಾದೇವಿ 2006ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದಲ್ಲದೆ ಐದು ಬಾರಿ ಏಶ್ಯನ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಾರೆ.

ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಇತರ ಎಂಟು ಮಹಿಳಾ ಬಾಕ್ಸರ್‌ಗಳೆಂದರೆ: ಪಿಂಕಿ ಜಾಂಗ್ರಾ(51ಕೆಜಿ),ಮನೀಶಾ ವೌನ್(54ಕೆಜಿ),ಸೋನಿಯಾ(57ಕೆಜಿ), ಸಿಮ್ರನ್‌ಜಿತ್ ಕೌರ್(64ಕೆಜಿ), ಲಾವ್ಲಿನಾ ಬೊರ್ಗೊಹೈನ್(69ಕೆಜಿ), ಸವೀಟಿ ಬೂರ(75ಕೆಜಿ), ಭಾಗ್ಯವತಿ(81ಕೆಜಿ) ಹಾಗೂ ಸೀಮಾ ಪೂನಿಯಾ(+81ಕೆಜಿ).

10 ದಿನಗಳ ಕಾಲ ನಡೆಯುವ ಚಾಂಪಿಯನ್‌ಶಿಪ್ ನ.24 ರಂದು ಕೊನೆಗೊಳ್ಳಲಿದೆ.

ಎರಡು ವರ್ಷಗಳ ಹಿಂದೆ ಫೆದರ್‌ವೇಟ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದ ಇಟಲಿಯ ಅಲಿಸ್ಸಿಯಾ ಮೆಸಿಯಾನೊ, 2016ರ ಬೆಳ್ಳಿ ಪದಕ ವಿಜೇತೆ ಆಸ್ಟ್ರೇಲಿಯದ ಕಾಯೆ ಸ್ಕಾಟ್, ಥಾಯ್ಲೆಂಡ್‌ನ ಪೀಮ್‌ವಿಲೈ ಲಾಯೊಪೀಮ್, ರಶ್ಯದ ಅನಸ್ಟಾಸಿಯಾ ಬೆಲಿಯಕೊವಾ ಅವರು ಚಿನ್ನದ ಪದಕ ಗೆಲ್ಲುವ ಸ್ಪರ್ಧಿಗಳಾಗಿದ್ದಾರೆ.

ಅಮೆರಿಕದ ವಿರ್ಜಿನಿಯ(51ಕೆಜಿ), ಚೀನಾದ ತೈಪೆಯ ಯಿನ್ ಜುನ್‌ಹ್ವಾ(57ಕೆಜಿ),ಫಿನ್‌ಲ್ಯಾಂಡ್‌ನ ಮೀರಾ ಪೊಟ್ಕೊನೆನ್(60ಕೆಜಿ), ಚೀನಾದ ಗು ಹಾಂಗ್(69ಕೆಜಿ), ಹಾಲೆಂಡ್‌ನ ನೌಚ್ಕಾ ಫಾಂಟಿಜಿನ್(75ಕೆಜಿ) ಚೀನಾದ ವಾಂಗ್ ಲಿನಾ(81ಕೆಜಿ) ಹಾಗೂ ಹಾಲಿ ಚಾಂಪಿಯನ್ ಯಾಂಗ್ ಕ್ಸಿಯೊಲಿ(+81ಕೆಜಿ)ಚಿನ್ನದ ಪದಕ ಗೆಲ್ಲುವ ಫೇವರಿಟ್ ಬಾಕ್ಸರ್‌ಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News