ಅಮೃತಸರ ದಸರಾ ದುರಂತದಿಂದ ಕಲಿಯದ ಪಾಠ: ರೈಲು ಹಳಿಯಲ್ಲೇ ಛಾತ್ ಪೂಜೆ

Update: 2018-11-15 04:28 GMT

ಭಟಿಂಡಾ, ನ.15: ಅಮೃತಸರ ಸಮೀಪ ಅಕ್ಟೋಬರ್ 19ರಂದು ರೈಲು ಹಳಿ ಮೇಲೆ ನಿಂತು ದಸರಾ ವೀಕ್ಷಿಸುತ್ತಿದ್ದವರ ಮೇಲೆ ರೈಲು ಹರಿದು 61 ಮಂದಿ ಬಲಿಯಾದ ಘಟನೆ ಇನ್ನೂ ಹಸಿಯಾಗಿದ್ದರೂ, ಜನತೆ ಮಾತ್ರ ಈ ದುರಂತದಿಂದ ಪಾಠ ಕಲಿತಿಲ್ಲ.

ಭಟಿಂಡಾದ ಸಿರ್ಹಿಂದ್ ಕಾಲುವೆ ಪಕ್ಕ ಛಾತ್‌ಪೂಜಾದಲ್ಲಿ ಭಾಗವಹಿಸಲು ಆಗಮಿಸಿದ್ದ ನೂರಾರು ಮಂದಿ ರೈಲುಹಳಿಯ ಮೇಲೆಯೇ ಜಮಾಯಿಸಿದ ದೃಶ್ಯ ಕಂಡುಬಂತು. ಬಹುತೇಕ ಮಹಿಳೆಯರನ್ನು ಒಳಗೊಂಡಿದ್ದ ಭಕ್ತರು ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ, ಹತ್ತಕ್ಕೂ ಹೆಚ್ಚು ರೈಲುಗಳು ಪ್ರತಿದಿನ ಓಡಾಡುವ ರೈಲುಹಳಿಯ ಮೇಲೆಯೇ ನಿಂತು ಸೂರ್ಯಪ್ರಾರ್ಥನೆ ನಡೆಸಿದರು. ಭಕ್ತಿ ಪರವಶರಾದ ಭಕ್ತರು ತಮ್ಮ ಜೀವ ಅಪಾಯದಲ್ಲಿದೆ ಎಂಬ ಎಚ್ಚರಿಕೆಯನ್ನೂ ಲೆಕ್ಕಿಸಲಿಲ್ಲ.

ಮಂಗಳವಾರ ರಾತ್ರಿ ರೈಲು ಹಳಿಯ ಮೇಲೆ ಭಕ್ತಸಮೂಹ ನೆರೆದಿದ್ದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿ, ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಭಟಿಂಡಾ-ಮಲೌಟ್ ವಲಯದಲ್ಲಿ ಜನ ಸೇರಿರುವ ರೈಲು ಹಳಿ ಮೇಲೆ ಪ್ರತಿದಿನ ಕನಿಷ್ಠ 12 ರೈಲುಗಳು ಸಂಚರಿಸುತ್ತವೆ. ಆದರೆ ಭಕ್ತರು ರೈಲು ಹಳಿಯ ಮೇಲಿರುವ ಸಂದರ್ಭದಲ್ಲಿ ಯಾವುದೇ ರೈಲು ಸಂಚರಿಸಲಿಲ್ಲ.

ರೈಲು ಹಳಿಯ ಮೇಲೆ ನಿಲ್ಲದಂತೆ ಜನರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಅದಕ್ಕೆ ಅವರು ಕಿವಿಗೊಡಲಿಲ್ಲ ಎಂದು ಜಿಆರ್‌ಪಿ ಠಾಣಾಧಿಕಾರಿ ಹರ್ಜೀಂದರ್ ಸಿಂಗ್ ಅಸಹಾಯಕತೆ ವ್ಯಕ್ತಪಡಿಸಿದರು. ಈ ಪ್ರದೇಶದ ಮೂಲಕ ಹಾದುಹೋಗುವ ರೈಲುಗಳ ವೇಗವನ್ನು ಕಡಿಮೆ ಮಾಡುವಂತೆ ಕೊನೆಗೆ ರೈಲ್ವೆ ಪೈಲಟ್‌ಗಳಿಗೆ ಸೂಚನೆ ನೀಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News