ಝಿಂಬಾಬ್ವೆ ಯನ್ನು ಮಣಿಸಿದ ಬಾಂಗ್ಲಾ

Update: 2018-11-15 18:56 GMT

ಢಾಕಾ, ನ.15: ಇಲ್ಲಿ ನಡೆದ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ಬ್ರೆಂಡನ್ ಟೇಲರ್ ಶತಕದ ಹೊರತಾಗಿಯೂ ಝಿಂಬಾಬ್ವೆ ತಂಡಕ್ಕೆ ಸೋಲು ತಪ್ಪಲಿಲ್ಲ. ಬಾಂಗ್ಲಾದೇಶ ತಂಡದ ವಿರುದ್ಧ 218 ರನ್‌ಗಳ ಸೋಲು ಅನುಭವಿಸಿದೆ.

ಶೇರ್ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ಟೆಸ್ಟ್‌ನ ಅಂತಿಮ ದಿನವಾಗಿರುವ ಗುರುವಾರ ಗೆಲುವಿಗೆ 443 ರನ್‌ಗಳ ಸವಾಲನ್ನು ಪಡೆದಿದ್ದ ಝಿಂಬಾಬ್ವೆ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 83.1 ಓವರ್‌ಗಳಲ್ಲಿ 224 ರನ್‌ಗಳಿಗೆ ಆಲೌಟಾಗಿದೆ.

ಮೊದಲ ಇನಿಂಗ್ಸ್‌ನಲ್ಲೂ ಟೇಲರ್ ಶತಕ(110) ದಾಖಲಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ಭರ್ಜರಿ ಆಟವಾಡಿದ ಟೇಲರ್ 106 ರನ್(167 ಎಸೆತ, 10 ಬೌಂಡರಿ)ಗಳಿಸಿ ಅಜೇಯರಾಗಿ ಉಳಿದರು.

ಬಾಂಗ್ಲಾದ ಆಫ್ ಸ್ಪಿನ್ನರ್ ಮೆಹಿದಿ ಹಸನ್ 38ಕ್ಕೆ 5 ವಿಕೆಟ್ ಉಡಾಯಿಸುವ ಮೂಲಕ ಟೆಸ್ಟ್‌ನಲ್ಲಿ ಐದನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದರು.

ಮೊದಲ ಟೆಸ್ಟ್‌ನಲ್ಲಿ ಝಿಂಬಾಬ್ವೆ 151 ರನ್‌ಗಳ ಜಯ ಗಳಿಸಿತ್ತು. ಆದರೆ ಎರಡನೇ ಟೆಸ್ಟ್‌ನಲ್ಲೂ ಅದೇ ರೀತಿಯ ಪ್ರದರ್ಶನ ನೀಡಿ ಗೆಲ್ಲುವ ಅಥವಾ ಡ್ರಾ ಮಾಡುವ ಪ್ರಯತ್ನವನ್ನು ಹಸನ್ ವಿಫಲಗೊಳಿಸಿದರು. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿ 1-1ಅಂತರದಲ್ಲಿ ಸಮನೆಲೆಯಲ್ಲಿ ಕೊನೆಗೊಂಡಿದೆ.

ಬಾಂಗ್ಲಾದ ತೈಜುಲ್ ಇಸ್ಲಾಂ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದ ಅವರು ಎರಡು ಟೆಸ್ಟ್ ಗಳಲ್ಲಿ 18 ವಿಕೆಟ್‌ಗಳೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು.

ಮೊದಲ ಇನಿಂಗ್ಸ್‌ನಲ್ಲಿ ಮುಶ್ಫಿಕುರ್ರಹೀಂ ದ್ವಿಶತಕ(ಔಟಾಗದೆ 219) ನೆರವಿನಲ್ಲಿ ಬಾಂಗ್ಲಾದೇಶ 160 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 522 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.ಎರಡನೇ ಇನಿಂಗ್ಸ್‌ನಲ್ಲೂ 54 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 224 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಝಿಂಬಾಬ್ವೆ ಪರ ಟೇಲರ್ ಮತ್ತು ಪೀಟರ್ ಮೂರ್ (83) ಆರನೇ ವಿಕೆಟ್‌ಗೆ 139 ರನ್‌ಗಳ ಜೊತೆಯಾಟ ನೀಡಿದ್ದರು. ಇದರಿಂದಾಗಿ ಝಿಂಬಾಬ್ವೆ ಸ್ಕೋರ್ 300 ರನ್‌ಗಳ ಗಡಿ ದಾಟಿತ್ತು.ಆದರೆ ಎರಡನೇ ಇನಿಂಗ್ಸ್‌ನಲ್ಲಿ ಮೂರ್ 79 ಎಸೆತಗಳನ್ನು ಎದುರಿಸಿ ಕೇವಲ 13 ರನ್‌ಗಳ ಕಾಣಿಕೆ ನೀಡಿದರು.

ನಾಲ್ಕನೇ ದಿನದಾಟದಂತ್ಯಕ್ಕೆ ಝಿಂಬಾಬ್ವೆ 30 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 76 ರನ್ ಗಳಿಸಿತ್ತು. ಟೇಲರ್ 4 ರನ್ ಮತ್ತು ವಿಲಿಯಮ್ಸ್ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಆದರೆ ಅಂತಿಮ ದಿನ ಈ ಮೊತ್ತಕ್ಕೆ ಝಿಂಬಾಬ್ವೆ 148 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.

ಸಂಕ್ಷಿಪ್ತ ಸ್ಕೋರ್

►ಬಾಂಗ್ಲಾದೇಶ ಮೊದಲ ಇನಿಂಗ್ಸ್ 522/7(ಡಿಕ್ಲೇರ್)

►ಬಾಂಗ್ಲಾದೇಶ ಎರಡನೇ ಇನಿಂಗ್ಸ್ 224/6(ಡಿಕ್ಲೇರ್)

►ಝಿಂಬಾಬ್ವೆ ಮೊದಲ ಇನಿಂಗ್ಸ್ 304

►ಝಿಂಬಾಬ್ವೆ ಎರಡನೇ ಇನಿಂಗ್ಸ್ 54 ಓವರ್‌ಗಳಲ್ಲಿ 224/6( ಟೇಲರ್ ಔಟಾಗದೆ 106, ಬ್ರಿಯಾನ್ ಚರಿ 43; ಹಸನ್ ಮೀರಾಝ್ 38ಕ್ಕೆ 5)

►ಪಂದ್ಯಶ್ರೇಷ್ಠ : ಮುಶ್ಫೀಕುರ್ರಹೀಂ

►ಸರಣಿ ಶ್ರೇಷ್ಠ : ತೈಜುಲ್ ಇಸ್ಲಾಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News