ವಿರಾಟ್, ರೋಹಿತ್ ದಾಖಲೆ ಮುರಿದ ಮಿಥಾಲಿ ರಾಜ್

Update: 2018-11-16 07:18 GMT

 ಗಯಾನ, ನ.16: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಿರ್ಮಿಸಿದ ಗರಿಷ್ಠ ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.

ಮಿಥಾಲಿ ರಾಜ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್‌ಗಳನ್ನು ದಾಖಲಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ.

 ಗುರುವಾರ ರಾತ್ರಿ ಐರ್ಲೆಂಡ್ ವಿರುದ್ಧ ‘ಬಿ’ ಗುಂಪಿನ ಪಂದ್ಯದಲ್ಲಿ 51 ರನ್ ದಾಖಲಿಸುವ ಮೂಲಕ ಭಾರತಕ್ಕೆ 52ರನ್‌ಗಳ ಗೆಲುವಿಗೆ ನೆರವಾಗಿದ್ದರು. ಭಾರತದ ಮಹಿಳಾ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿದೆ. ಮಿಥಾಲಿ ರಾಜ್ 51 ರನ್ ಗಳಿಸುವ ಮೂಲಕ ಟ್ವೆಂಟಿ-20 ಕ್ರಿಕೆಟ್ ನಲ್ಲಿ ರೋಹಿತ್ ಮತ್ತು ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದರು.

  ಐರ್ಲೆಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತದ ಇನಿಂಗ್ಸ್ ಆರಂಭಿಸಿದ ಮಿಥಾಲಿ ರಾಜ್ ಮತ್ತು ಸ್ಮತಿ ಮಂಧಾನ ಮೊದಲ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿದರು.

35ರ ಹರೆಯದ ಮಿಥಾಲಿ 56 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 51 ರನ್ ಗಳಿಸಿದ್ದರು. ಸ್ಮತಿ 33 ರನ್(29ಎ, 4ಬೌ, 1ಸಿ) ಗಳಿಸಿದರು. ಮಿಥಾಲಿ ರಾಜ್ 85ನೇ ಟ್ವೆಂಟಿ-20 ಪಂದ್ಯ 80ನೇ ಇನಿಂಗ್ಸ್‌ನಲ್ಲಿ 51 ರನ್ ಗಳಿಸುವ ಮೂಲಕ ಟ್ವೆಂಟಿ- 20 ಕ್ರಿಕೆಟ್‌ನಲ್ಲಿ ದಾಖಲಿಸಿದ ರನ್ ಸಂಖ್ಯೆನ್ನು 2,283ಕ್ಕೆ ಏರಿಸಿದ್ದಾರೆ. ಟ್ವೆಂಟಿ-20ಯಲ್ಲಿ 17 ಅರ್ಧಶತಕಗಳನ್ನು ದಾಖಲಿಸಿರುವ ಮಿಥಾಲಿ ಅವರು ಔಟಾಗದೆ 97ರನ್ ಗಳಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.  ಮಿಥಾಲಿ ರಾಜ್ ವನಿತೆಯರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 47 ಎಸೆತಗಳಲ್ಲಿ 56 ಗಳಿಸಿದ್ದರು.

ಟ್ವೆಂಟಿ-20ಯಲ್ಲಿ ಭಾರತದ ಪರ ಗರಿಷ್ಠ ರನ್‌ಗಳ ದಾಖಲೆ

ಆಟಗಾರರು                        ರನ್‌           ಇನಿಂಗ್ಸ್

 1. ಮಿಥಾಲಿ ರಾಜ್             2,283          80

 2. ರೋಹಿತ್ ಶರ್ಮಾ         2,207           80

 3. ವಿರಾಟ್ ಕೊಹ್ಲಿ             2,102            58

 4. ಹರ್ಮನ್‌ಪ್ರೀತ್ ಕೌರ್     1,827            80

 5. ಸುರೇಶ್ ರೈನಾ            1,605             66

6. ಎಂ.ಎಸ್.ಧೋನಿ            1,487             80

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News