ಪ್ರತಿಭಟನಕಾರರಿಂದ ತಡೆ: ಪುಣೆಗೆ ಹಿಂದಿರುಗಲಿರುವ ತೃಪ್ತಿ ದೇಸಾಯಿ

Update: 2018-11-16 15:10 GMT

ಕೊಚ್ಚಿ,ನ.16: ನ.17ರಂದು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಲು ಪಣ ತೊಟ್ಟಿದ್ದ ಲಿಂಗ ಸಮಾನತೆ ಹೋರಾಟಗಾರ್ತಿ ಹಾಗೂ ಭೂಮಾತಾ ಸಂಘಟನೆಯ ಸ್ಥಾಪಕಿ ತೃಪ್ತಿ ದೇಸಾಯಿ ಅವರು ಶುಕ್ರವಾರ ತನ್ನ ತಂಡದೊಂದಿಗೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರಾದರೂ 500ಕ್ಕೂ ಅಧಿಕ ಪ್ರತಿಭಟನಾಕಾರರು ನಿರ್ಗಮನ ದ್ವಾರಗಳಲ್ಲಿ ತಡೆಯೊಡ್ಡಿದ್ದರಿಂದ ಹೊರಗೆ ತೆರಳಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ 13 ಗಂಟೆಗಳಿಗೂ ಅಧಿಕ ಸಮಯ ನಿಲ್ದಾಣದಲ್ಲಿಯೇ ಬಾಕಿಯಾಗಿದ್ದ ಅವರು ಕೊನೆಗೂ ರಾತ್ರಿ ಪುಣೆಗೆ ವಾಪಸಾಗಲಿದ್ದಾರೆ.

ದೇಸಾಯಿ ಮತ್ತು ಇತರ ಆರು ಮಹಿಳಾ ಯಾತ್ರಿಗಳು(ಎಲ್ಲರೂ 50 ವರ್ಷಕ್ಕೂ ಕೆಳಗಿನವರು) ಶುಕ್ರವಾರ ನಸುಕಿನ 4:40ಕ್ಕೆ ಪುಣೆಯಿಂದ ಕೊಚ್ಚಿಗೆ ಆಗಮಿಸಿದ್ದರು. ಪ್ರತಿಭಟನಾಕಾರರು ಅವರು ನಿಲ್ದಾಣದಿಂದ ಹೊರಗೆ ಬೀಳಲು ಅವಕಾಶ ನೀಡಲಿಲ್ಲ. ತಮ್ಮ ಸುರಕ್ಷತೆಯ ಬಗ್ಗೆ ಹೆದರಿಕೊಂಡಿದ್ದ ಟ್ಯಾಕ್ಸಿ ಚಾಲಕರೂ ಅವರನ್ನು ಮುಂದಿನ ಪ್ರಯಾಣಕ್ಕೆ ಕರೆದೊಯ್ಯಲು ಸಿದ್ಧರಿರಲಿಲ್ಲ.

ಎಲ್ಲ ವಯೋಮಾನದವರಿಗೂ ಶಬರಿಮಲೆಗೆ ಪ್ರವೇಶಾವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಸೆ.28ರ ತೀರ್ಪಿನ ಬಳಿಕ ಮೂರನೇ ಬಾರಿಗೆ ಶುಕ್ರವಾರ ಸಂಜೆ ದೇವಸ್ಥಾನದ ಬಾಗಿಲುಗಳನ್ನು ಮಕರವಿಳಕ್ಕುಂ ಯಾತ್ರಾಋತುವಿಗಾಗಿ ತೆರೆಯಲಾಗಿದೆ. ಭಕ್ತರು ಮತ್ತು ಕಾರ್ಯಕರ್ತರ ತೀವ್ರ ಪ್ರತಿಭಟನೆಗಳಿಂದಾಗಿ ತೀರ್ಪಿನ ಬಳಿಕ ದೇವಸ್ಥಾನವನ್ನು ಪ್ರವೇಶಿಸಲು ಮಹಿಳೆಯರಿಗೆ ಇನ್ನೂ ಸಾಧ್ಯವಾಗಿಲ್ಲ.

“ನಾವು ಟ್ಯಾಕ್ಸಿಗಳನ್ನು ಗೊತ್ತು ಮಾಡಿಕೊಳ್ಳಲೂ ಪ್ರತಿಭಟನಾಕಾರರು ಅವಕಾಶ ನೀಡುತ್ತಿಲ್ಲ. ನಮ್ಮ ವಾಹನಗಳಿಗೆ ಹಾನಿ ಮಾಡುವುದಾಗಿ ನಮಗೆ ಬೆದರಿಕೆಯೊಡ್ಡಲಾಗಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ದೇಸಾಯಿ ತಿಳಿಸಿದರು. ಪ್ರತಿಭಟನಾಕಾರರು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ ಎಂದರು.

10ರಿಂದ 50 ವರ್ಷ ವಯೋಮಾನದ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ದೇವಸ್ಥಾನದ ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಉಲ್ಲಂಘಿಸಲೆಂದೇ ದೇಸಾಯಿ ಮತ್ತು ಅವರ ತಂಡವು ಇಲ್ಲಿಗೆ ಬಂದಿದೆಯೇ ಹೊರತು ದೇವರ ದರ್ಶನಕ್ಕಾಗಿ ಅಲ್ಲ. ಶನಿವಾರದಿಂದ ಆರಂಭಗೊಳ್ಳುತ್ತಿರುವ ಯಾತ್ರಾಋತುವಿನ ಶಾಂತಿಯನ್ನು ಕದಡುವುದು ಅವರ ಉದ್ದೇಶವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 ವಿಮಾನ ನಿಲ್ದಾಣದ ಹೊರಗೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರರಲ್ಲಿ ಮಹಿಳೆಯರು ಮತ್ತು ಸಂಘ ಪರಿವಾರ ಕಾರ್ಯಕರ್ತರು ಇದ್ದು ಅಯ್ಯಪ್ಪ ಮಂತ್ರವನ್ನು ಪಠಿಸುತ್ತಿದ್ದರು. ದೇಸಾಯಿ ಶಬರಿಮಲೆಗೆ ತೆರಳಲು ತಾವು ಅವಕಾಶ ನೀಡುವುದಿಲ್ಲ,ಆದರೆ ತಮ್ಮ ಪ್ರತಿಭಟನೆ ಶಾಂತಿಯುತವಾಗಿರುತ್ತದೆ ಎಂದು ಕೇರಳದ ಬಿಜೆಪಿ ನಾಯಕ ಎಂ.ಎನ್.ಗೋಪಿ ತಿಳಿಸಿದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರೀ ಸಂಖ್ಯೆಯಲ್ಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿದ್ದಾರೆ.

ಅಯ್ಯಪ್ಪ ಸ್ವಾಮಿಯ ದರ್ಶನ ಮಾಡದೇ ತಾವು ಮಹಾರಾಷ್ಟ್ರಕ್ಕೆ ಮರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದ ದೇಸಾಯಿ,ಶಬರಿಮಲೆ ಭೇಟಿ ಸಂದರ್ಭದಲ್ಲಿ ತನಗೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಇ-ಮೇಲ್‌ನ್ನೂ ಕಳುಹಿಸಿದ್ದರು.

ಆರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

ತನ್ಮಧ್ಯೆ ಈ ಹಿಂದೆ ಶಬರಿಮಲೆ ಮತ್ತು ನಿಲಕ್ಕಲ್‌ನಲ್ಲಿ ಪ್ರತಿಭಟನೆ ಸಂದರ್ಭ ಹಿಂಸಾಚಾರಕ್ಕೆ ಸಂಬಂಧಿಸದಂತೆ ಬಂಧಿಸಲಪಟ್ಟವರ ಪೈಕಿ ಆರು ಆರೋಪಿಗಳಿಗೆ ಕೇರಳ ಉಚ್ಚ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News