ಬೋಯಿಂಗ್ ಕಂಪೆನಿ ವಿರುದ್ಧ ‘ಲಯನ್ ಏರ್’ ಪ್ರಯಾಣಿಕನ ಕುಟುಂಬ ಮೊಕದ್ದಮೆ

Update: 2018-11-16 16:36 GMT

ಜಕಾರ್ತ, ನ. 16: ಇಂಡೋನೇಶ್ಯದ ಲಯನ್ ಏರ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರೊಬ್ಬರ ಕುಟುಂಬವು ವಿಮಾನವನ್ನು ನಿರ್ಮಿಸಿದ ಬೋಯಿಂಗ್ ಕಂಪೆನಿಯ ವಿರುದ್ಧ ಮೊಕದ್ದಮೆ ದಾಖಲಿಸಿದೆ.

ಬೋಯಿಂಗ್ ಕಂಪೆನಿಯ ಹೊಚ್ಚ ಹೊಸ ‘737’ ಮಾದರಿಯ ವಿಮಾನದ ಹಾರಾಟ ನಿಯಂತ್ರಣ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ ವಿಮಾನ ಪತನಗೊಂಡಿರಬಹುದು ಎಂಬುದಾಗಿ ಪ್ರಯಾಣಿಕ ರಿಯೊ ನಂದ ಪ್ರಥಮ ಅವರ ತಂದೆ ಅಮೆರಿಕದ ಇಲಿನಾಯಿಸ್ ರಾಜ್ಯದ ನ್ಯಾಯಾಲಯವೊಂದರಲ್ಲಿ ಬುಧವಾರ ದಾಖಲಿಸಿದ ದೂರಿನಲ್ಲಿ ಹೇಳಿದ್ದಾರೆ.

ಇಲಿನಾಯಿಸ್‌ನಲ್ಲಿ ಅಮೆರಿಕದ ವಿಮಾನ ನಿರ್ಮಾಣ ಕಂಪೆನಿಯ ಪ್ರಧಾನ ಕಚೇರಿಯಿದೆ.

ವೈದ್ಯರಾಗಿದ್ದ ನಂದ ಪ್ರಥಮ ಕಳೆದ ರವಿವಾರ ತನ್ನ ಹೈಸ್ಕೂಲ್ ಗೆಳತಿಯನ್ನು ಮದುವೆಯಾಗಬೇಕಾಗಿತ್ತು. ಅವರ ವಧು ಇಂತಾನ್ ಸಯಾರಿ ಮದುವೆಯ ದಿನ ಮದುವೆ ಬಟ್ಟೆಯನ್ನು ತೊಟ್ಟು ಒಂಟಿಯಾಗಿ ಫೊಟೊ ತೆಗೆಸಿಕೊಂಡು ಸುದ್ದಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಲಯನ್ ಏರ್ ವಾಯುಯಾನ ಸಂಸ್ಥೆಗೆ ಸೇರಿದ ಬೋಯಿಂಗ್ 737-ಮ್ಯಾಕ್ಸ್ ವಿಮಾನವು ಅಕ್ಟೋಬರ್ 29ರಂದು ಜಕಾರ್ತ ವಿಮಾನ ನಿಲ್ದಾಣದಿಂದ ಪಂಗ್‌ಕಲ್ ಪಿನಂಗ್ ಪಟ್ಟಣಕ್ಕೆ ಹಾರುತ್ತಿದ್ದಾಗ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News